ರಕ್ತದಾನ ದೈಹಿಕ ಆರೋಗ್ಯಕ್ಕೆ ಸಹಕಾರಿ

| Published : Dec 03 2024, 12:33 AM IST

ಸಾರಾಂಶ

ದೇಶದಲ್ಲಿ ಪ್ರತಿ ವರ್ಷ ೪೦ ದಶಲಕ್ಷಕ್ಕಿಂತ ಹೆಚ್ಚು ಯೂನಿಟ್ ರಕ್ತದ ಕೊರತೆ ಇದೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿವೆ, ಜನ ಜಾಗೃತಿ ಅಭಿಯಾನ ಮೂಲಕ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು

ಕನ್ನಡಪ್ರಭ ವಾರ್ತೆ ಕೆಜಿಎಫ್ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಿಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ ಅತ್ಮತೃಪ್ತಿ ಸಿಗುತ್ತದೆ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ರಕ್ತನಿಧಿ ತಾಂತ್ರಿಕ ವಿಭಾಗದ ರೇವತಿ ತಿಳಿಸಿದರುಡಾ.ತಿಮ್ಮಯ್ಯ ತಾಂತ್ರಿಕ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಶಿಬಿರವು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಪ್ರತಿ ವರ್ಷ ೪೦ ದಶಲಕ್ಷಕ್ಕಿಂತ ಹೆಚ್ಚು ಯೂನಿಟ್ ರಕ್ತದ ಕೊರತೆ ಇದೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕೆಂದು ತಿಳಿಸಿದರು.

ತಪ್ಪು ಕಲ್ಪನೆ ಹೋಗಲಾಡಿಸಿ

ಎನ್‌ಎಸ್‌ಎಸ್ ಶಿಬಿರದ ಮುಖ್ಯಸ್ಥ ಡಾ.ಎನ್.ಎಲ್.ಲಕ್ಷ್ಮಿಪತಿ ಮಾತನಾಡಿ, ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿವೆ, ಜನ ಜಾಗೃತಿ ಅಭಿಯಾನ ಮೂಲಕ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು, ನಮ್ಮ ಹಿರಿಯರು ಹೇಳಿದಂತೆ ರಕ್ತ ಕೊಟ್ಟು ನೋಡು, ಸಂಬಂಧ ಕಟ್ಟಿ ನೋಡು ಎಂಬಂತೆ ನಾವು ರಕ್ತದಾನ ಮಾಡಬೇಕು ಎಂದು ಹೇಳಿದರು.ಪ್ರಾಂಶುಪಾಲ ಸೈಯದ್ ಅರಿಫ್ ಮಾತನಾಡಿ, ಸೈನಿಕರು ಗಡಿಯಲ್ಲಿ ದೇಶ ಸೇವೆ ಮಾಡುತ್ತಿದ್ದು, ಸಾರ್ವಜನಿಕರು ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯ ಮಾಡಿದರೆ ದೇಶ ಸೇವೆ ಮಾಡಿದಂತಾಗುತ್ತದೆ, ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕೆಂದು ಕರೆ ನೀಡಿದರು.38 ಯೂನಿಟ್‌ ರಕ್ತ ಸಂಗ್ರಹ

ಡಾ.ತಿಮ್ಮಯ್ಯ ತಾಂತ್ರಿಕ ಕಾಲೇಜಿನಲ್ಲಿ ಪ್ರತಿ ವರ್ಷ ೮೦ ರಿಂದ ೧೦೦ ಯೂನಿಟ್ ರಕ್ತದಾನ ವಿದ್ಯಾರ್ಥಿಗಳು ಮಾಡುತ್ತಿದ್ದು, ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯವಿದ್ದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳ ರಕ್ತದಾನ ಮಾಡುವವರ ಪಟ್ಟಿ ನಮ್ಮಲ್ಲಿ ಇರುತ್ತದೆ ಎಂದರು. ರಕ್ತದಾನ ಶಿಬಿರದಲ್ಲಿ ೩೮ ಯೂನಿಟ್ ರಕ್ತವನ್ನು ಸಂಗ್ರಹಿಸಿ ಕೆಜಿಎಫ್‌ನ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ನೀಡಲಾಯಿತು.