ರಕ್ತದಾನದಿಂದ ಜೀವ ಉಳಿಸುವ ಶ್ರೇಷ್ಠ ಕಾರ್ಯ: ಅನಿಲ್ ಕುಮಾರ್ ಭೂಮಾರೆಡ್ಡಿ

| Published : Jun 09 2024, 01:31 AM IST

ರಕ್ತದಾನದಿಂದ ಜೀವ ಉಳಿಸುವ ಶ್ರೇಷ್ಠ ಕಾರ್ಯ: ಅನಿಲ್ ಕುಮಾರ್ ಭೂಮಾರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಯುವಕರು ಆರೋಗ್ಯಕರ ಜೀವನ ನಡೆಸಬೇಕು. ಉತ್ತಮ ಚಟುವಟಿಕೆಯಿಂದ ಗುರಿ ಸಾಧಿಸಬೇಕು. ಆರ್ಥಿಕವಾಗಿ ಸದೃಢರಾಗಿ ದೇಶದ ಅಸ್ತಿಯಾಗಬೇಕು ಎಂದು ತಿಳಿಸಿದರು. ಶೇ.95 ರಷ್ಟು ಅಪಘಾತ ಯುವಕರ ಅಜಾಗರೂಕತೆಯಿಂದ ಆಗುತ್ತದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ನಗರದಲ್ಲಿ ಪ್ರತಿ ದಿನ 5ರಿಂದ 6 ಅಪಘಾತ ಆಗುತ್ತಿವೆ. ತಾಳ್ಮೆ ಇದ್ದರೆ ಅಪಘಾತ ತಡೆಘಟ್ಟಬಹುದು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆರೋಗ್ಯವಂತ ಯುವಜನತೆ ರಕ್ತದಾನ ಮಾಡಲು ಮುಂದಾಗಬೇಕು. ಜೀವ ಉಳಿಸುವ ಕಾಯಕದಲ್ಲಿ ಕೈಜೋಡಿಸಬೇಕು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ ಹೇಳಿದರು.

ನಗರದ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ರೋಟರಿ ಜ್ಯುಬಿಲಿ, ಸ್ವಯಂ ಪ್ರೇರಿತ ರಕ್ತದಾನಿಗಳ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಯುವಕರು ಆರೋಗ್ಯಕರ ಜೀವನ ನಡೆಸಬೇಕು. ಉತ್ತಮ ಚಟುವಟಿಕೆಯಿಂದ ಗುರಿ ಸಾಧಿಸಬೇಕು. ಆರ್ಥಿಕವಾಗಿ ಸದೃಢರಾಗಿ ದೇಶದ ಅಸ್ತಿಯಾಗಬೇಕು ಎಂದು ತಿಳಿಸಿದರು.

ಶೇ.95 ರಷ್ಟು ಅಪಘಾತ ಯುವಕರ ಅಜಾಗರೂಕತೆಯಿಂದ ಆಗುತ್ತದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ನಗರದಲ್ಲಿ ಪ್ರತಿ ದಿನ 5ರಿಂದ 6 ಅಪಘಾತ ಆಗುತ್ತಿವೆ. ತಾಳ್ಮೆ ಇದ್ದರೆ ಅಪಘಾತ ತಡೆಘಟ್ಟಬಹುದು. ಸುರಕ್ಷತೆ ಅತ್ಯಂತ ಅವಶ್ಯಕ ಎಂದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಅಶ್ವತ್ಥ್ ನಾರಾಯಣ ಶೆಟ್ಟಿ ಮಾತನಾಡಿ, ರಕ್ತದಾನಕ್ಕೆ ಮೊದಲಿನಿಂದಲೂ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ನಲವತ್ತು ಬಾರಿ ರಕ್ತದಾನ ಮಾಡಿರುವ ತೃಪ್ತಿ ಇದೆ. ರಕ್ತದಾನ ಪುಣ್ಯದ ಕೆಲಸ ಎಂದು ಅಭಿಪ್ರಾಯಪಟ್ಟರು.

ಜೆಎನ್‌ಎನ್‌ಸಿಸಿ ಪ್ರಾಚಾರ್ಯ ಡಾ.ವೈ.ವಿಜಯಕುಮಾರ್ ಮಾತನಾಡಿ, ರಕ್ತದಾನ ಮಾಡುವ ಜತೆಯಲ್ಲಿ ಇತರರಿಗೂ ರಕ್ತದಾನ ಮಾಡಲು ಪ್ರೇರೆಪಿಸಬೇಕು. ರಕ್ತದಾನ ಮಾಡೋಣ ಎಂದು ಹೇಳಿದರು.

ರೋಟರಿ ಜ್ಯುಬಿಲಿ ಅಧ್ಯಕ್ಷ ರೇಣುಕಾರಾಧ್ಯ ಮಾತನಾಡಿ, ಮೈಸೂರಿನಲ್ಲಿ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುವಾಗ ಮಧ್ಯರಾತ್ರಿ ನಟರೊಬ್ಬರಿಗೆ ಅಪಘಾತವಾಗಿ ಮೂರು ಯುನಿಟ್ ವಿಶೇಷ ರಕ್ತದ ಅವಶ್ಯಕತೆ ಇತ್ತು. ಅಲ್ಲಿಯ ತಾಂತ್ರಿಕ ಕಾಲೇಜಿನ ಹಾಸ್ಟೆಲ್ ಹುಡುಗರು ಆ ರಾತ್ರಿ ಆಸ್ವತ್ರೆಗೆ ಆಗಮಿಸಿ ರಕ್ತದಾನ ಮಾಡಿದ್ದನ್ನು ಎಂದು ಮರೆಯುವುದಿಲ್ಲ. ರೋಟರಿ ಎಂದೆಂದಿಗೂ ಇಂತಹ ಕಾರ್ಯದಲ್ಲಿ ಮುಂದಿರುತ್ತದೆ ಎಂದು ತಿಳಿಸಿದರು.

ರಕ್ತದಾನ ಶಿಬಿರದಲ್ಲಿ 158 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಸ್ವಯಂ ಪ್ರೇರಿತ ರಕ್ತದಾನಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಧರಣೇಂದ್ರ ದಿನಕರ್, ಛಾಯಾ, ರೂಪಾ ಪುಣ್ಯಕೋಟಿ, ಅರುಣ್ ಕುಮಾರ್, ಆನಂದರಾಜ್, ಬಸವರಾಜ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ್, ಗಿರೀಶ್, ವಾಗೇಶ್, ಸುರೇಶ, ಡಾ. ದಿನಕರ್, ಬಸಪ್ಪ , ವಿದ್ಯಾರ್ಥಿಗಳು ಇದ್ದರು.