ರಕ್ತದಾನ ಮನುಷ್ಯರ ಜೀವ ಉಳಿಸುವ ಕಾರ್ಯಕ್ರಮ

| Published : May 15 2025, 01:37 AM IST

ಸಾರಾಂಶ

ರಕ್ತದಾನವು ಜಾತಿ ಧರ್ಮ ಭೇದವಿಲ್ಲದೇ ಮನುಷ್ಯರ ಜೀವ ಉಳಿಸುವ ಕಾರ್ಯಕ್ರಮ ಎಂದು ರೇ. ಫಾ. ವಿಜಯ್‌ಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ರಕ್ತದಾನವು ಜಾತಿ ಮತ ಪಂಥ ಭೇದವಿಲ್ಲದೆ ಮನುಷ್ಯರ ಜೀವ ಉಳಿಸುವ ಕಾರ್ಯಕ್ರಮವಾಗಿದ್ದು, ರಕ್ತದಾನ ಮಹತ್ವ ಅರ್ಥವಂತಿಕೆಯನ್ನು ಯುವಜನತೆಯಲ್ಲಿ ಹೆಚ್ಚಾಗಿ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ರೇ.ಫಾ.ವಿಜಯಕುಮಾರ್ ಹೇಳಿದ್ದಾರೆ.ಇತ್ತೀಚೆಗೆ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಸಂತ ಅಂತೋಣಿಯವರ ದೇವಾಲಯ ಇವರ ಸಂಯುಕ್ತಾಶ್ರಯದಲ್ಲಿ 14ನೇ ವರ್ಷ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ ಮತ್ತು ಇತರ ಕ್ರೀಡಾಕೂಟಗಳು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದ ಉದ್ಘಾಟಕರಾಗಿ ಪಾಲ್ಗೊಂಡು ಮಾತನಾಡಿದರು.

ರಕ್ತದಾನಕ್ಕೆ ಯಾವುದೇ ಜಾತಿ ಮತ ಇಲ್ಲ. ಯಾಕೆಂದರೆ ಎಲ್ಲರ ರಕ್ತದ ಬಣ್ಣವು ಕೆಂಪಾಗಿದ್ದು, ಈ ಸರಳ ಸತ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ, ವಿವಿಧತೆಯಲ್ಲಿ ಏಕತೆಯನ್ನು ಪಾಲಿಸಿಕೊಂಡು ಪರಸ್ಪರ ಸಾಮರಸ್ಯ ಮತ್ತು ಸೌಹಾರ್ದತೆಯಿಂದ ಬಾಳಬಹುದು ಎಂದು ಕಿವಿಮಾತು ಹೇಳಿದ ಅವರು ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಸಮಾಜ ಸಾಗುತ್ತಿರುವ ದಾರಿಯನ್ನು ನೋಡಿದಾಗ ರಕ್ತದಾನ ಶಿಬಿರದ ಮೂಲಕ ನಾವೆಲ್ಲಾರೂ ಒಂದೇ ಪರಮಸತ್ಯವನ್ನು ಸಾರಿ ನಾವೆಲ್ಲಾರೂ ಒಗ್ಗಟ್ಟಿನಿಂದ ಬದುಕಬೇಕಾಗಿದೆ. ಈ ನಿಟ್ಟಿನಲ್ಲಿ ಯುವಜನತೆ ಮತ್ತು ಎಲ್ಲಾ ಜಾತಿ ಜನಾಂಗ ಪ್ರಮುಖರು ರಕ್ತದಾನ ಶಿಬಿರಗಳನ್ನು ಹೆಚ್ಚು ಹೆಚ್ಚಾಗಿ ಸಂಘಟಿಸುವಂತೆ ಅವರು ಕರೆ ನೀಡಿದರು.ಕೊಡಗು ವೈದ್ಯಕೀಯ ಸಂಸ್ಥೆಗಳ ಅಧೀನದಲ್ಲಿರುವ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಅನಿಲ್ ಕರುಂಬಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಕ್ತದಾನದ ಮಹತ್ವ ಹೆಚ್ಚಾಗಿ ಪ್ರಚಾರಗೊಳ್ಳುತ್ತಿದ್ದು ವಿಶೇಷ ಸಂದರ್ಭಗಳಲ್ಲಿ ಸಾಮೂಹಿಕ ರಕ್ತದಾನ ಶಿಬಿರ ಏರ್ಪಡಿಸುತ್ತಿರುವುದು ಶ್ಲಾಘನೀಯ. ಹಾಗೆಯೇ ವೈಯಕ್ತಿಕ ನೆಲೆಗಟ್ಟಿನಲ್ಲಿ ಕೂಡ ನಿಯಮಿತವಾಗಿ ರಕ್ತದಾನ ಮಾಡುವುದು ಹವ್ಯಾಸವಾಗಬೇಕು ಎಂದು ಕರೆ ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ವಹಿಸಿದ್ದರು.25 ಕ್ಕೂ ಹೆಚ್ಚು ಮಂದಿ ರಕ್ತದಾನ ಶಿಬಿರದಲ್ಲಿ ರಕ್ತದಾನವನ್ನು ಮಾಡಿದರು.ಈ ಕಾರ್ಯಕ್ರಮದಲ್ಲಿ ಅಮ್ಮತ್ತಿ ದೇವಾಲಯದ ಧರ್ಮಗುರುಗಳಾದ ಮದಲೈಮುತ್ತು, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಜೋವಿಟಾ ವಾಝ್, ಸಂತ ಅಂತೋಣಿ ದೇವಾಲಯದ ಕ್ರೀಡಾ ಆರ್ಥಿಕ ಸಮಿತಿ ಅಧ್ಯಕ್ಷ ಪಿ.ಎಂ.ಬಿಜು, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಜೋಕಿಂ ವಾಝ್, ಜೋಕಿಂ ರಾಡ್ರಿಗಸ್, ಯೇಸುದಾಸ್, ಕಾರ್ಯದರ್ಶಿ ಜೂಡಿವಾಝ್, ಖಜಾಂಜಿ ಜೇಮ್ಸ್ ಡಿ’ಸೋಜ, ಮಹಿಳಾ ಘಟಕದ ಅಧ್ಯಕ್ಷ ಪಿಲೋಮಿನಾ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಹಾಗೂ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮಹಿಳಾ ಘಟಕಗಳ ಸದಸ್ಯರಾದ ರೋಸ್‌ಮೇರಿ ರಾಡ್ರಿಗಸ್, ಗ್ರೇಸಿ ಡೇವಿಡ್, ಗೌರವ ಸಲಹೆಗಾರರಾದ ಎಸ್.ಎಂ.ಡಿಸಿಲ್ವ, ರ‍್ವಿನ್ ಲೋಬೋ, ಆಗಸ್ಟಿನ್ ಜಯರಾಜ್, ಅಂತೋಣಿ ಡಿ’ಸೋಜ, ಪಿ.ಎಫ್.ಸಬಾಸ್ಟೀನ್, ಡೆನ್ನಿ ಬರೋಸ್, ಪಿಲಿಫ್‌ವಾಸ್, ಯುವಘಟಕದ ಅಧ್ಯಕ್ಷ ಬಬುಲು ಸೇರಿದಂತೆ ಮತ್ತಿತರರು ಇದ್ದರು.