ರಕ್ತದಾನದಿಂದ ಆರೋಗ್ಯ ವೃದ್ಧಿಯಾಗಲಿದೆ. ಆರೋಗ್ಯವಂತ ವ್ಯಕ್ತಿಯೊಬ್ಬರು ಸುರಕ್ಷಿತವಾಗಿ ರಕ್ತದಾನ ಮಾಡಬಹುದಾಗಿದೆ.
ಬಳ್ಳಾರಿ: ರಕ್ತದಾನ ಮಾನವೀಯತೆಯ ಅತ್ಯುನ್ನತ ಸೇವೆಯಲ್ಲಿ ಒಂದಾಗಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೊರ್ಲಗುಂದಿ ವಿ. ದೊಡ್ಡ ಕೇಶವರೆಡ್ಡಿ ಹೇಳಿದರು.
ಸಹಕಾರ ಸಪ್ತಾಹ ಹಿನ್ನೆಲೆಯಲ್ಲಿ ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಆವರಣದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಕ್ತದಾನದಿಂದ ಆರೋಗ್ಯ ವೃದ್ಧಿಯಾಗಲಿದೆ. ಆರೋಗ್ಯವಂತ ವ್ಯಕ್ತಿಯೊಬ್ಬರು ಸುರಕ್ಷಿತವಾಗಿ ರಕ್ತದಾನ ಮಾಡಬಹುದಾಗಿದೆ. ದಾನ ಮಾಡಿದ ರಕ್ತವನ್ನು ದೇಹವು ಕೆಲವೇ ದಿನಗಳಲ್ಲಿ ಪುನಃ ಉತ್ಪಾದಿಸಿಕೊಳ್ಳುತ್ತದೆ. ವೈಜ್ಞಾನಿಕ ವಿಧಾನದಲ್ಲಿ ನಡೆಯುವ ರಕ್ತದಾನದಿಂದ ದಾನಿಗಳ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿ-ಯುವಜನರು ರಕ್ತದಾನದಂತಹ ಮಹತ್ತರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ರಕ್ತವನ್ನು ಕೃತವಾಗಿ ತಯಾರಿಸಲು ಸಾಧ್ಯವಿಲ್ಲ. ಅದರ ಅಗತ್ಯ ಬಂದಾಗ ಆರೋಗ್ಯವಂತ ವ್ಯಕ್ತಿಯ ದಾನವೇ ಜೀವ ಉಳಿಸುವ ಏಕೈಕ ಮಾರ್ಗವಾಗಿದೆ. ಇಂದು ನೀವು ನೀಡುವ ಒಂದು ಹನಿ ರಕ್ತ ನಾಳೆ ಯಾರದೋ ಜೀವಕ್ಕೆ ಹೊಸ ಆಶಾಕಿರಣವಾಗಬಹುದು ಎಂದು ಹೇಳಿದರು.
ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ದೇವಣ್ಣ, ನಿರ್ದೇಶಕರಾದ ಬಿ. ಚಂದ್ರಶೇಖರ, ಜಗದೀಶಗೌಡ, ಎಲ್. ಗೋವಿಂದ ನಾಯ್ಕ, ದಮ್ಮೂರು ಷಣ್ಮುಖ, ಕರಡಿ ನಾಗರಾಜ್, ಕೆ. ವರಬಸಪ್ಪ, ಲಕ್ಷ್ಮೀನಾರಾಯಣ, ಟಿ. ತುಳಸಪ್ಪ, ಎ. ಲತಾ, ಗಂಗಮ್ಮ ವಿ., ಕೆ. ಪಾಲಾಕ್ಷರೆಡ್ಡಿ, ನಾಮ ನಿರ್ದೇಶಕ ಸದಸ್ಯ ಕೆ. ರಾಘವೇಂದ್ರ, ಬ್ಯಾಂಕಿನ ವ್ಯವಸ್ಥಾಪಕ ಎ. ದೀಪಕ್ ಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಜೆ.ಎಂ. ನಾಗರಾಜ್, ಜಿಲ್ಲಾ ವ್ಯವಸ್ಥಾಪಕ ಸಿ. ಮಂಜುನಾಥ, ಕೊರ್ಲಗುಂದಿ ಗ್ರಾಪಂ ಅಧ್ಯಕ್ಷ ರಾಘವರೆಡ್ಡಿ, ಜನತಾ ಬಜಾರ್ ನಿರ್ದೇಶಕ ವಿ. ಪ್ರದೀಪರೆಡ್ಡಿ ಭಾಗವಹಿಸಿದ್ದರು. ರಕ್ತದಾನದಲ್ಲಿ ಭಾಗವಹಿಸಿದ್ದ ಯುವಕರಿಗೆ ಬ್ಯಾಂಕಿನ ಅಧ್ಯಕ್ಷ ಕೊರ್ಲಗುಂದಿ ವಿ. ದೊಡ್ಡಕೇಶವ ರೆಡ್ಡಿ ಪ್ರಮಾಣಪತ್ರಗಳನ್ನು ವಿತರಿಸಿದರು.ಕೇಂದ್ರದ ಸಹಕಾರ ಸಚಿವಾಲಯ ಸ್ಥಾಪನೆಗೊಂಡು ಐದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪಿಕಾರ್ಡ್ ಬ್ಯಾಂಕ್ ವತಿಯಿಂದ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ.