ಹನೂರು ಕ್ಷೇತ್ರದ ಅಭಿವೃದ್ಧಿಗೆ ನೀಲನಕ್ಷೆ ಪ್ರಸ್ತಾವನೆ

| Published : Apr 19 2025, 12:32 AM IST

ಸಾರಾಂಶ

ಹನೂರು ತಾಲೂಕಿನ ಮಲೆಮಾದೇಶ್ವರ ಬೆಟ್ಟದಲ್ಲಿ ಏ.24ರಂದು ನಡೆಯಲಿರುವ ಸಚಿವ ಸಂಪುಟ ಸಭೆ ಹಿನ್ನೆಲೆ ಸಿದ್ಧತೆಗಳ ಬಗ್ಗೆ ಪೂರ್ವ ಪ್ರಯೋಗ ಕಾರ್ಯಕ್ರಮಗಳ ವೀಕ್ಷಿಸಿ ನಂತರ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಹಾಗೂ ಶಾಸಕ ಮಂಜುನಾಥ್‌ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು ಮಾದಪ್ಪನ ಸನ್ನಿಧಿಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಸಂತೋಷದ ವಿಚಾರ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು ಮತ್ತು ಶಾಸಕರು ಹಿರಿಯ ಅಧಿಕಾರಿಗಳು ಭಾಗವಹಿಸುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿ ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎಂಆರ್ ಮಂಜುನಾಥ್ ತಿಳಿಸಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಏ.24ರಂದು ನಡೆಯಲಿರುವ ಸಚಿವ ಸಂಪುಟ ಸಭೆ ಹಿನ್ನೆಲೆ ಸಿದ್ಧತೆಗಳ ಬಗ್ಗೆ ಪೂರ್ವ ಪ್ರಯೋಗ ಕಾರ್ಯಕ್ರಮಗಳ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಾದಪ್ಪನ ಸನ್ನಿಧಿಯಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆ ಸಂತಸ ತಂದಿದೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಮತ್ತು ಎಲ್ಲ ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಈ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೀಲ ನಕ್ಷ ತಯಾರಿಸಿ ಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗೆ ಸಂಬಂಧಪಟ್ಟ ಇಲಾಖೆ ಸಚಿವರಿಗೆ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಡೀ ಕ್ಷೇತ್ರದ ಸಮಗ್ರ ಚಿತ್ರಣದ ಬಗ್ಗೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಕ್ಷೇತ್ರದ ಅಭಿವೃದ್ಧಿಯ ಭರವಸೆ:

ಮಲೆಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಕ್ಷೇತ್ರದ ಪ್ರಮುಖ ಅಭಿವೃದ್ಧಿ ಕಾಮಗಾರಿಗಳಾದ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರಸ್ತೆಗಳ ಅಭಿವೃದ್ಧಿ ನೀರಾವರಿ ಸಂಬಂಧಿಸಿದಂತೆ ಪ್ರವಾಸೋದ್ಯಮ ಸೇರಿದಂತೆ ರೈತರಿಗೆ ಪ್ರಮುಖವಾಗಿ ನೀರಾವರಿ ವಿದ್ಯುತ್ ಮತ್ತು ರಸ್ತೆಗಳ ಅಭಿವೃದ್ಧಿಗೆ ಗೊತ್ತು ನೀಡಲಾಗಿದ್ದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿ ಹಾಗೂ ಸಚಿವರ ಬಳಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಭಾಗದ ಜನತೆ ಪ್ರಮುಖವಾಗಿ ಮಾದೇಶ್ವರ ಬೆಟ್ಟದ ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೂ ಸಹ ಒತ್ತು ನೀಡಲು ಕ್ಯಾಬಿನೆಟ್ ಸವಿಯಲ್ಲಿ ವಿಶೇಷ ಪ್ಯಾಕೇಜ್ ನೀಡುವ ಭರವಸೆ ಇದೆ ಎಂದರು.

ಮಲೆಮಾದೇಶ್ವರ ಬೆಟ್ಟದಲ್ಲಿ ಉದ್ಘಾಟನೆ:

ಮಲೆಮಹದೇಶ್ವರ ಬೆಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳಾದ ದೊಡ್ಡಕೆರೆ ಅಭಿವೃದ್ಧಿ ಜೊತೆಗೆ ಯುಜಿಡಿ ಸೇರಿದಂತೆ 376 ಕೊಠಡಿಗಳ ಉದ್ಘಾಟನೆ ಸೇರಿದಂತೆ ಸೋಲಾರ್ ಉದ್ಘಾಟನೆ ಮತ್ತು ನಾಲ್ಕು ಸಾವಿರ ಜನ ಒಂದೇ ಸ್ಥಳದಲ್ಲಿ ಕುಳಿತು ದಾಸೋಹ ಮಾಡಲು ಶಂಕುಸ್ಥಾಪನೆ ಸಹ ಪ್ರಮುಖವಾಗಿ ನಡೆಯಲಿದೆ. ಉಳಿದಂತ ಮಲೆಮಹದೇಶ್ವರ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ 15 ರಿಂದ 20 ವರ್ಷಗಳ ಕಾಲ ಅಭಿವೃದ್ಧಿ ಕುಂಠಿತಗೊಂಡಿದ್ದು ಈ ಭಾಗದ ಜನಗಳ ಆಶಯದಂತೆ ಕ್ಯಾಬಿನೆಟ್ ಸಭೆಯಲ್ಲಿ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಹನೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಗೆ ವಿಶೇಷ ಪ್ರಾಧಿನಿಧ್ಯವನ್ನು ಸಿಎಂ ನೀಡಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಮಾದೇಶ್ವರ ಬೆಟ್ಟ ಶ್ರೀ ಕ್ಷೇತ್ರದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಈ ಭಾಗದ ಸಮಗ್ರ ಅಭಿವೃದ್ಧಿ ಜೊತೆಗೆ ಸಿಎಂ ಸಹ ಚಾಮರಾಜನಗರ ಜಿಲ್ಲೆಗೆ ಏಳು ಬಾರಿ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದ್ದಾರೆ ಎಂದರು.

ಜಿಲ್ಲೆಯನ್ನು ಚೆಲುವ ಚಾಮರಾಜನಗರ ಎನ್ನುವ ನಿಟ್ಟಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮತ್ತು ಜನಸಾಮಾನ್ಯರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಜಿಲ್ಲೆಗೆ ಮತ್ತು ಡಿವಿಷನ್ ಗೆ ಪೂರಕವಾಗಿದೆ ಎಂದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಇಡೀ ಕ್ಯಾಬಿನೆಟ್ ದರ್ಜೆಯ ಸಚಿವರು ಸಹ ಈ ಸಭೆಯಲ್ಲಿ ಭಾಗವಹಿಸುತ್ತಿರುವುದು ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಸಹ ಭಾಗವಹಿಸುತ್ತಿರುವುದರಿಂದ ಈಗಾಗಲೇ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತು ಹನೂರು ತಾಲೂಕಿನ ಜಲತ್ವ ಸಮಸ್ಯೆಗಳಿಗೆ ಪೂರಕ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. 24 ರಂದು ನಡೆಯುವ ಕ್ಯಾಬಿನೆಟ್ ಸಭೆ ಮುನ್ನ ಸಚಿವ ಸಂಪುಟ ಸಿದ್ಧತೆಗಳು ಹಾಗೂ ಪೂರ್ವ ಪ್ರಯೋಗ ಕಾರ್ಯಕ್ರಮಗಳ ಬಗ್ಗೆ ಸಮಿತಿ ರಚನೆ ಮಾಡಿ ಇಡೀ ಜಿಲ್ಲೆಯ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದರು.

ಸಚಿವ ಸಂಪುಟ ಸಭೆ ನಡೆಯಲು ಬೇಕಾದ ಸಕಲ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಶ್ರೀ ಕ್ಷೇತ್ರದಲ್ಲೂ ಯಾವುದೇ ಲೋಪದೋಷಗಳು ಬರದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಆಯಾ ಇಲಾಖೆಗೆ ಸೂಚನೆ ನೀಡಲಾಗಿತ್ತು. ಅಚ್ಚುಕಟ್ಟಾಗಿ ಎಲ್ಲ ವ್ಯವಸ್ಥೆಗಳು ನಡೆಯುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಹಾಗೂ ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಧರ್ಮೇಂದರ್ ಸೇರಿದಂತೆ ಚಾಮರಾಜನಗರ ಜಿಲ್ಲೆಯ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.