ಸಾರಾಂಶ
ಪ್ರಯಾಣಿಕರಿಗೆ ಬಿಎಂಟಿಸಿಯಿಂದ ನೀಡಲಾಗುವ ಡಿಜಿಟಲ್ ಮಾದರಿಯ ಬಸ್ ಪಾಸ್‌ಗಳನ್ನು ಸೆ.15ರಿಂದ ಮೊಬೈಲ್ ಆ್ಯಪ್ ಮೂಲಕ ವಿತರಿಸಲು ನಿರ್ಧರಿಸಲಾಗಿದೆ.
ಬೆಂಗಳೂರು: ಪ್ರಯಾಣಿಕರಿಗೆ ಬಿಎಂಟಿಸಿಯಿಂದ ನೀಡಲಾಗುವ ಡಿಜಿಟಲ್ ಮಾದರಿಯ ಬಸ್ ಪಾಸ್‌ಗಳನ್ನು ಸೆ.15ರಿಂದ ಮೊಬೈಲ್ ಆ್ಯಪ್ ಮೂಲಕ ವಿತರಿಸಲು ನಿರ್ಧರಿಸಲಾಗಿದೆ. ಬಿಎಂಟಿಸಿಯು ದಿನದ, ವಾರದ ಹಾಗೂ ಮಾಸಿಕ ಬಸ್ ಪಾಸ್‌ಗಳನ್ನು ವಿತರಿಸುತ್ತಿದೆ. ಈವರೆಗೆ ಪೂರ್ವ ಮುದ್ರಿತ ಹಾಗೂ ಡಿಜಿಟಲ್ ಮಾದರಿಯಲ್ಲಿ ಪಾಸ್‌ಗಳನ್ನು ವಿತರಿಸಲಾಗುತ್ತಿದೆ. ಪ್ರಯಾಣಿಕರಿಗೆ ಸುಲಭವಾಗಿ ಬಸ್ ಪಾಸ್ ಸಿಗುವಂತೆ ಮಾಡಲು ಹಾಗೂ ನಗದು ರಹಿತ, ಕಾಗದ ರಹಿತ ಮತ್ತು ಸಂಪರ್ಕ ರಹಿತ ವಹಿವಾಟಿಗಾಗಿ ಸೆ. 15ರಿಂದ ಡಿಜಿಟಲ್ ಮಾದರಿಯ ಪಾಸ್‌ಗಳನ್ನು ಬಿಎಂಟಿಸಿ ಅಭಿವೃದ್ಧಿ ಪಡಿಸಿರುವ ಮೊಬೈಲ್ ಆ್ಯಪ್ ಮೂಲಕ ವಿತರಿಸಲಾಗುತ್ತದೆ. ಪ್ರಯಾಣಿಕರು ಡಿಜಿಟಲ್ ಪಾಸ್ ಪಡೆಯಲು ತಮ್ಮ ಮೊಬೈಲ್‌ನಲ್ಲಿ ಟುಮ್ಯಾಕ್ ಆ್ಯಪ್ (Tummoc app)ನ್ನು ಡೌನ್‌ಲೋಡ್ ಮಾಡಿಕೊಂಡು ನೋಂದಣಿಯಾಗಬೇಕಿದೆ.
ನಂತರ ಪಾಸ್‌ನ ಮಾದರಿಯನ್ನು ಆಯ್ಕೆ ಮಾಡಿ ವಿವರವನ್ನು ಭರ್ತಿ ಮಾಡಬೇಕು ಹಾಗೂ ಭಾವಚಿತ್ರವನ್ನು ಕ್ಲಿಕ್ಕಿಸಬೇಕು. ನಂತರ ಪಾಸ್‌ನ ಮೊತ್ತವನ್ನು ಪಾವತಿಸಿದರೆ ಡಿಜಿಟಲ್ ಪಾಸ್ ಲಭ್ಯವಾಗಲಿದೆ. ಬಸ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಡಿಜಿಟಲ್ ಪಾಸ್ ಹಾಗೂ ಗುರುತಿನ ಚೀಟಿಯನ್ನು ನಿರ್ವಾಹಕರಿಗೆ ತೋರಿಸಿ ಪ್ರಯಾಣಿಸಬಹುದು. ಹೆಚ್ಚಿನ ಮಾಹಿತಿಗೆ www.mybmtc. karnataka.gov.inಗೆ ಸಂಪರ್ಕಿಬಹುದು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.