ಗುರುವಾರ ರಾತ್ರಿ ಹೇಮಾವತಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ಇಬ್ಬರ ಶವ ಭಾನುವಾರ ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಗುರುವಾರ ರಾತ್ರಿ ಹೇಮಾವತಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ಇಬ್ಬರ ಶವ

ಭಾನುವಾರ ಪತ್ತೆಯಾಗಿದೆ.

ಕೊಡ್ಲಿಪೇಟೆ ವ್ಯಾಪ್ತಿಯ ನೀರುಗುಂದ ಗ್ರಾಮದ ನಿವಾಸಿಗಳಾದ ಶಿವರಾಜ್ (೫೦) ಮತ್ತು ನಾಗರಾಜ್ (೪೫) ಎಂಬವರು ಗುರುವಾರ ರಾತ್ರಿ ಮೀನು ಹಿಡಿಯಲು ತೆರಳಿದ್ದು, ಮರು ದಿನ ಬೆಳಗ್ಗೆವರರಗೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಅವರ ಮನೆಯವರು ಶನಿವಾರಸಂತೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.

ಶುಕ್ರವಾರ ಮಧ್ಯಾಹ್ನದಿಂದ ಅಗ್ನಿಶಾಮಕ ದಳ, ಎನ್‌ಆರ್‌ಎಫ್ ಪಡೆ ಮತ್ತು ಪೊಲೀಸರು ಜಂಟಿಯಾಗಿ ಹೇಮಾವತಿ ಹಿನ್ನೀರಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಶುಕ್ರವಾರ ಸಂಜೆವರೆಗೂ ಅವರ ಸುಳಿವು ಸಿಗದ ಹಿನ್ನೆಲೆಯಲ್ಲಿ ಶನಿವಾರವೂ ಶೋಧ ಕಾರ್ಯಾಚರಣೆ ನಡೆಸಿದ್ದರೂ ಸುಳಿವು ಸಿಕ್ಕಿರಲಿಲ್ಲ. ಭಾನುವಾರ ಬೆಳಗ್ಗೆ ಮತ್ತೆ ಎನ್‌ಆರ್‌ಎಫ್ ಪಡೆ, ಅಗ್ನಿಶಾಮಕ ದಳದವರು ಹೇಮಾವತಿ ಹಿನ್ನೀರಿನಲ್ಲಿ ಶೋಧ ಕಾರ್ರ್ಯಾಚರಣೆ ಮುಂದುವರಿಸಿದ್ದರು. ಬೆಳಗ್ಗೆ ೯ ಗಂಟೆಗೆ ಇಬ್ಬರು ನಾಪತ್ತೆಯಾಗಿದ್ದ ಸ್ಥಳದಿಂದ ೧ ಕಿ.ಮೀ. ದೂರದಲ್ಲಿರುವ ಜನಾರ್ದನಹಳ್ಳಿ ಗ್ರಾಮದ ಹಿನ್ನೀರಿನ ದಡದಲ್ಲಿ ನಾಗರಾಜ್ ಅವರ ಶವ ಪತ್ತೆಯಾದರೆ ಸ್ವಲ್ವ ದೂರದಲ್ಲಿ ಶಿವರಾಜ್ ಶವ ಪತ್ತೆಯಾಗಿದೆ.

ಶಾಸಕರಿಂದ ಸಾಂತ್ವನ:

ಘಟನೆ ಸಂಬಂಧ ಸ್ಥಳಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ, ಮೃತರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಶಾಸಕರ ಸೂಚನೆ ಮೇರೆಗೆ ವೈದ್ಯರು ಶಿವರಾಜ್ ಮತ್ತು ನಾಗರಾಜ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನೀರುಗುಂದ ಗ್ರಾಮದ ಸ್ಮಶಾನದಲ್ಲಿ ನಡೆಸಿದರು. ನಂತರ ಕುಟುಂಬದವರು ಇಬ್ಬರ ಅಂತ್ಯಕ್ರಿಯೆಯನ್ನು ಅಲ್ಲೆ ನೆರವೇರಿಸಿದರು.