ಸಾರಾಂಶ
ನೂತನ ದೇಗುಲ ಪ್ರವೇಶ, ಮೂರ್ತಿ ಪ್ರತಿಷ್ಠಾಪನಾ ಉತ್ಸವ । ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಸೊರಬಮನುಷ್ಯ ಜನ್ಮ ದೊರಕುವುದು ಬಹು ದುರ್ಲಭ. ಅದರಲ್ಲೂ ಇಂತಹ ನಾಡಿನಲ್ಲಿ ಹುಟ್ಟುವುದು ಬಹು ದುರ್ಲಭ. ಅಂತಹ ಜನ್ಮವನ್ನು ದುಶ್ಚಟ ಮಾಡುವ ಮೂಲಕ ಹಾಳು ಗೆಡವಬಾರದು ಎಂದು ಸಮಾಧಾನ ಹಿರೇಮಠ ಜಡೆ ಬಂಕಸಾಣ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ತಾಲೂಕಿನ ಕುದುರೆಗಣಿ ಗ್ರಾಮದಲ್ಲಿ ಸರ್ವ ಭಕ್ತರ ಸಹಕಾರದಿಂದ ನೂತನವಾಗಿ ನಿರ್ಮಿಸಿರುವ ಶ್ರೀ ವೀರಭದ್ರೇಶ್ವರ ದೇವಾಲಯ ಪ್ರವೇಶೋತ್ಸವ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಚೌಡೇಶ್ವರಿ ಹಾಗೂ ವಿಘ್ನ ನಿವಾರಕ ಗಣಪತಿ ಮೂರ್ತಿಗಳ ಪ್ರಾಣ ಪ್ರತಿಷ್ಠೆ ನೆರವೇರಿಸಿ ಮಾತನಾಡಿದರು.ಭಾರತೀಯ ಪರಂಪರೆಯಲ್ಲಿ ಮನುಷ್ಯ ಮಹಾದೇವನ ಒಂದು ಅಂಶ ಎಂಬುದಾಗಿ ಹೇಳಲಾಗಿದೆ. ಉಪನಿಷತ್ತುಗಳೂ ಇದನ್ನೇ ಉಲ್ಲೆಖಿಸಿವೆ. ಆತ್ಮ ಪರಮಾತ್ಮನ ಒಂದು ಅಂಶ ಎಂದಿವೆ. ಇಂತಹ ಭಗವಂತ ವಾಸವಾಗಿರುವ ದೇಹದಲ್ಲಿ ಮನುಷ್ಯ ದುಶ್ಚಟ ಮಾಡಿದರೆ ಆ ದೇಹದಲ್ಲಿ ದೇವರು ನೆಲೆಸುವುದಿಲ್ಲ. ಮನೆಯಲ್ಲಿ ಮಕ್ಕಳು ತಪ್ಪು ಮಾಡಿದರೆ ತಂದೆ ತಾಯಿ ಆ ಮಕ್ಕಳನ್ನು ಬೈದು ಬಡಿದು ಸರಿದಾರಿಗೆ ತರುವಂತೆ ಇಂದು ನಾವು ತಪ್ಪು ಮಾಡುವವರನ್ನು ಸರಿ ದಾರಿಗೆ ತರಬೇಕಿದೆ ಎಂದರು.
ಕ್ಯಾಸನೂರು ಹಾಗೂ ತೊಗರ್ಸಿ ಗುರುಬಸವ ಪಂಡಿತಾರಾಧ್ಯ ಮಹಾಸ್ವಾಮಿ ಮಾತನಾಡಿ, ಈ ಚಿಕ್ಕ ಗ್ರಾಮದಲ್ಲಿ ಇಂತಹ ಅದ್ಭುತ ದೇವಾಲಯ ನಿರ್ಮಾಣ ಮಾಡಿರುವುದು ಸಾಹಸವೆ ಸರಿ. ಸಂಪತ್ತಿಗೆ ಬಡತನ ಇರಬಹುದು ಆದರೆ ಭಕ್ತಿಗೆ ಬಡತನ ಇಲ್ಲ ಎಂಬುದು ಇಲ್ಲಿ ಸಾಬೀತಾಗಿದೆ ಎಂದರು.ದುಗ್ಲಿ ಹಾಗೂ ಕಡೆನಂದಿಹಳ್ಳಿ ರೇವಣಸಿದ್ಧಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ. ದೇವರು ನಮ್ಮ ಭಕ್ರಿಯನ್ನು ನೋಡುತ್ತಾನೆ. ದೇವರನ್ನು ಒಳಲಿಸಿಕೊಳ್ಳಲು ಅನನ್ಯ ಭಕ್ತಿಯನ್ನು ಮಾಡಬೇಕಾಗುತ್ತದೆ. ಹಾಗೆ ಮಾಡಿದಾಗ ದೇವನೋಲುಮೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಜಡೆ ಮಹಾಂತ ಮಹಾಸ್ವಾಮಿಗಳು, ಗೌರಿಕೆರೆ ಮಠದ ಸದಾಶಿವ ಸ್ವಾಮಿಗಳು, ಯುವರಾಜ ಸ್ವಾಮಿ, ಕೆರಿಯಪ್ಪ, ಸೈಯದ್ ಸೊರಬ, ಜಿಪಂ ಮಾಜಿ ಸದಸ್ಯ ಗುರುಕುಮಾರ ಪಾಟೀಲ್, ದೇವಾಲಯ ಸಮಿತಿಯ ಅಧ್ಯಕ್ಷರಾದ ಅಣ್ಣಪ್ಪ ಮೂಡಿ ಮಾತನಾಡಿದರು.ದೇವಾಲಯ ನಿರ್ಮಾಣ ಸಮಿತಿ ಹಾಗೂ ಕಾರ್ಯಕ್ರಮ ಸಮಿತಿ ಹಾಗೂ ಗ್ರಾಮ ಸಮಿತಿ ಹಾಗೂ ಗ್ರಾಮದ ಮತ್ತು ಸುತ್ತ ಮುತ್ತಲ ಸದ್ಭಕ್ತರು ಉಪಸ್ಥಿತರಿದ್ದರು. ವೇ ಮಲ್ಲಿಕಾರ್ಜುನ ಶಾಸ್ತ್ರಿಗಳು ಅರಮನೆ ಮಠ ಹಾಗೂ ವೃಂದದವರಿಂದ ವೈದಿಕ ಕಾರ್ಯಗಳು ನೆರವೇರಿದವು. ಹನುಮಂತಪ್ಪ, ರುದ್ರಪ್ಪ, ಶಶಿಧರ ಗೌಡ್ರು, ಮಲ್ಲಿಕಾರ್ಜುನ ಗೌಡ್ರು, ರುದ್ರಗೌಡ್ರು, ಸತೀಶ್ ಗೌಡ್ರು, ಹೇಮಂತ, ಪರಶುರಾಮಪ್ಪ ಮುಂತಾದವರು ಹಾಜರಿದ್ದರು.