ಸಾರಾಂಶ
ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ ಬಳಿ ಯೋಗವನ್ನು ಅಭ್ಯಸಿಸಿ, ಗೋ ಸಂರಕ್ಷಣೆಯನ್ನೇ ತನ್ನ ಜೀವನದ ಧ್ಯೇಯವಾಗಿಸಿಕೊಂಡ ಸ್ವಾಮೀಜಿ
ಕನ್ನಡಪ್ರಭ ವಾರ್ತೆ ಮೈಸೂರು
ಗೋ ಉತ್ಪನ್ನಗಳ ಸಂಶೋಧಕರಾದ ಯೋಗಿ ನಾರಾಯಣ ಭಟ್ಟ ಸ್ವಾಮೀಜಿ ಅವರು ಸಮಾಜದ ಉದ್ಧಾರಕ್ಕಾಗಿ ತನ್ನನ್ನು ತಾನೇ ಅರ್ಪಿಸಿಕೊಂಡ ಮಹಾನ್ ಚೇತನ ಎಂದು ಹಿರಿಯ ಆಯುರ್ವೇದ ತಜ್ಞ ವೈದ್ಯ ಡಾ.ಎ.ಎಸ್. ಚಂದ್ರಶೇಖರ್ ತಿಳಿಸಿದರು.ನಗರದ ಬೋಗಾದಿಯ ಯೋಗಾಂಬರದಲ್ಲಿ ಗೋ ಸಾಯಿ ಸೇವಾ ಟ್ರಸ್ಟ್ ಹಾಗೂ ಹಿಮಾಲಯ ಪ್ರತಿಷ್ಠಾನ ಸಂಯುಕ್ತವಾಗಿ ಗುರುವಾರ ಏರ್ಪಡಿಸಿದ್ದ ಶ್ರೀ ನಾರಾಯಣ ಭಟ್ಟ ಸ್ವಾಮೀಜಿ ಅವರ ಎರಡನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಲೇಖಕ ಎನ್. ಅನಂತ ಸಂಪಾದಿಸಿರುವ ಕರ್ಮಯೋಗಿ ನಾರಾಯಣ ಭಟ್ಟ ಸ್ವಾಮೀಜಿ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು. ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ ಬಳಿ ಯೋಗವನ್ನು ಅಭ್ಯಸಿಸಿ, ಗೋ ಸಂರಕ್ಷಣೆಯನ್ನೇ ತನ್ನ ಜೀವನದ ಧ್ಯೇಯವಾಗಿಸಿಕೊಂಡ ಸ್ವಾಮೀಜಿ ಹಸುವಿನ ಸಗಣಿ, ಗಂಜಲ ಸೇರಿದಂತೆ ಗೋ ಉತ್ಪನ್ನಗಳನ್ನು ಸಂಶೋಧನೆಗೊಳಪಡಿಸಿ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಪರಿಹಾರ ನೀಡುವಲ್ಲಿ ಅಹರ್ನಿಶಿ ಶ್ರಮಿಸಿದರು ಎಂದರು.ಗೋ ಸಾಯಿ ಸೇವಾ ಟ್ರಸ್ಟ್ ಮಹಾಪೋಷಕ ಪ್ರೊ. ಗುರುಪಾದ ಕೆ. ಹೆಗಡೆ ಮಾತನಾಡಿ, ಯೋಗ ಕ್ಷೇತ್ರದಲ್ಲಿ ನಾನಾ ಆವಿಷ್ಕಾರಗಳನ್ನು ಕೈಗೊಂಡ ಸ್ವಾಮೀಜಿ ದುರ್ಗಾ ನಮಸ್ಕಾರದಂತಹ ಹೊಸ ವಿಧಾನವನ್ನು ರೂಪಿಸಿ, ಪ್ರತಿ ದಸರಾ ಸಂದರ್ಭ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ದುರ್ಗಾ ನಮಸ್ಕಾರ ನಡೆಯಲು ಕಾರಣೀಭೂತರಾದರು ಎಂದು ಸ್ಮರಿಸಿದರು. ಹಿರಿಯ ಸಮಾಜಸೇವಕ ಕೆ. ರಘುರಾಂ ವಾಜಪೇಯಿ, ಗೋ ಸಾಯಿ ಸೇವಾ ಟ್ರಸ್ಟ್‌ನ ಪೋಷಕ ಗೋಪಾಲಕೃಷ್ಣ ಭಟ್, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್. ಅನಂತ, ಟ್ರಸ್ಟ್ ಅಧ್ಯಕ್ಷ ನಾಗರಾಜಪ್ಪ, ಉಪಾಧ್ಯಕ್ಷೆ ಸಂಧ್ಯಾ ಹೆಗಡೆ, ಕಾರ್ಯದರ್ಶಿ ರಾಘವೇಂದ್ರ ಭಟ್ ಇದ್ದರು.