ಬೀಳಗಿ ಶುಗರ್ಸ್‌ ಯುನಿಟ್-೨ರ ಬಾಯ್ಲರ್ ಪ್ರದೀಪನ ಸಮಾರಂಭ

| Published : Oct 14 2025, 01:02 AM IST

ಸಾರಾಂಶ

ಲೋಕಾಪುರ ಸಮೀಪದ ತಿಮ್ಮಾಪುರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ಬೀಳಗಿ ಶುಗರ್ಸ್‌ ಯುನಿಟ್-೨ ಬಾಯ್ಲರ್ ಪ್ರದೀಪನ ಸಮಾರಂಭ ಅದ್ಧೂರಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಮೀಪ ತಿಮ್ಮಾಪುರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಯ ಬೀಳಗಿ ಶುಗರ್ಸ್‌ ಯುನಿಟ್-೨ ಬಾಯ್ಲರ್ ಪ್ರದೀಪನ ಸಮಾರಂಭ ಅದ್ಧೂರಿಯಾಗಿ ಜರುಗಿತು. ಮಾಜಿ ಸಚಿವ ಎಸ್.ಆರ್. ಪಾಟೀಲ ಕಾರ್ಖಾನೆಯ ೨೦೨೫-೨೬ನೇ ಹಂಗಾಮಿನ ಬಾಯ್ಲರ್ ಪ್ರದೀಪನಾ ಸಮಾರಂಭದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ಮಾತನಾಡಿ, ಎಲ್ಲ ರೈತರ ಸದಸ್ಯರು ತಾವು ಬೆಳೆದ ಗುಣಮಟ್ಟದ ಕಬ್ಬನ್ನು ಕಾರ್ಖಾನೆಗೆ ಕಳುಹಿಸುವಂತೆ ಮನವಿ ಮಾಡಿದರು. ಪ್ರಸಕ್ತ ಸಾಲಿನಲ್ಲಿ ೬ ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧಿಸಲು ೧೨೦ ರಿಂದ ೧೫೦ ದಿನಗಳವರೆಗೆ ನಿರಂತರ ಕಬ್ಬು ನುರಿಸುವ ಅಗತ್ಯವಿದ್ದು, ಕಾರ್ಮಿಕರು ಹಗಲು ರಾತ್ರಿ ಶ್ರಮಿಸಬೇಕಾಗುತ್ತದೆ. ಅಗ್ರಿಕಲ್ಚರ್ ವಿಭಾಗದ ಅಧಿಕಾರಿಗಳು ಸ್ಥಳೀಯ ರೈತರಿಂದಲೇ ಹೆಚ್ಚಿನ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಪೂರೈಸುವಂತೆ ತಿಳಿಸಿದರು. ನಿರ್ದೇಶಕ ಎಚ್.ಎಲ್. ಪಾಟೀಲ ಮಾತನಾಡಿ, ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಅನುಭವವಿರುವ, ಹಿರಿಯರೂ ಆದ ಎಸ್.ಆರ್. ಪಾಟೀಲರ ನೇತೃತ್ವದಲ್ಲಿ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮೊದಲಿನ ಗತವೈಭವ ಮರಳಿ ಪಡೆಯಲಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಕಳುಹಿಸಿ ಎಂದು ರೈತರಲ್ಲಿ ಕೋರಿ, ರೈತರ ಸಹಕಾರ ಕಾರ್ಮಿಕರ ದುಡಿಮೆಯಿಂದ ಈ ಕಾರ್ಖಾನೆ ದೊಡ್ಡದಾಗಿ ಬೆಳೆದು ರೈತರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಹಾರೈಸಿದರು.

ನಿರ್ದೇಶಕರಾದ ಸುರೇಶಗೌಡ, ಲಕ್ಷ್ಮಣ ನಿರಾಣಿ, ಮಂಜುನಾಥ ಅರಳಿಕಟ್ಟಿ, ಆಡಳಿತಾಧಿಕಾರಿ ರಾಹುಲಗೌಡ ನಾಡಗೌಡ, ಮಾಜಿ ನಿರ್ದೇಶಕ ದಯಾನಂದ ಪಾಟೀಲ, ಗಿರೀಶ ಲಕ್ಷಾಣಿ, ರಾಜುಗೌಡ ಪಾಟೀಲ, ಯಲ್ಲಪ್ಪ ದಾಸರಡ್ಡಿ, ಪಾಂಡುರಂಗ ಹೂವಣ್ಣವರ, ತಮ್ಮಣ್ಣಪ್ಪ ಅರಳಿಕಟ್ಟಿ, ಕಾರ್ಮಿಕರ ಸಂಘದ ಅಧ್ಯಕ್ಷ ಈರನಗೌಡ ಪಾಟೀಲ, ಉಪಾಧ್ಯಕ್ಷ ಉಮೇಶ ಬಡಿಗೇರ ಹಾಗೂ ಕಾರ್ಖಾನೆ ಸಿಬ್ಬಂದಿ ವರ್ಗ, ರೈತರು, ಶೇರುದಾರರು ಇದ್ದರು.