ಉತ್ತರ ಕನ್ನಡ ಜಿಲ್ಲಾ ಪ್ರಧಾನ ನ್ಯಾಯಾಲಯದ ಕಂಪ್ಯೂಟರ್ ವಿಭಾಗಕ್ಕೆ ಸೋಮವಾರ ಬೆಳ್ಳಂಬೆಳಗ್ಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿತ್ತು.
ಕನ್ನಡಪ್ರಭ ವಾರ್ತೆ ಕಾರವಾರ
ಉತ್ತರ ಕನ್ನಡ ಜಿಲ್ಲಾ ಪ್ರಧಾನ ನ್ಯಾಯಾಲಯದ ಕಂಪ್ಯೂಟರ್ ವಿಭಾಗಕ್ಕೆ ಸೋಮವಾರ ಬೆಳ್ಳಂಬೆಳಗ್ಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದು, ನ್ಯಾಯಾಲಯದ ಆವರಣದಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. "ನ್ಯಾಯಾಧೀಶರ ಕೊಠಡಿಯಲ್ಲಿ 2 ಕಡೆ ಆರ್‌ಡಿಎಕ್ಸ್ ಮತ್ತು ಐಇಡಿ ಸ್ಫೋಟಕ ಇರಿಸಲಾಗಿದ್ದು, ಶೀಘ್ರದಲ್ಲೇ ಸ್ಫೋಟಗೊಳ್ಳಲಿವೆ'''''''' ಎಂದು ಬೆದರಿಕೆ ಹಾಕಲಾಗಿತ್ತು.ಬೆಳಗ್ಗೆ 8.25ಕ್ಕೆ pdjuttarakannada@karnataka.gov.in ವಿಳಾಸಕ್ಕೆ ಸುನ್ನಿಯಾ ದಾಸನ್ ಹೆಸರಿನ sunniya_dasan@outlook.com ಎಂಬ ಐಡಿಯಿಂದ ಈ ಬೆದರಿಕೆ ಮೇಲ್ ಬಂದಿದೆ. ತಮಿಳುನಾಡಿನಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ರಕ್ಷಿಸಿ. ಮಧ್ಯಾಹ್ನ 12.15ರ ಒಳಗಾಗಿ ಕೋರ್ಟ್‌ನಲ್ಲಿರುವ ಎಲ್ಲರನ್ನೂ ಸ್ಥಳಾಂತರಿಸಿ ಎಂದು ಮೇಲ್‌ನಲ್ಲಿ ಎಚ್ಚರಿಸಲಾಗಿತ್ತು. ಸಂದೇಶದ ಕೊನೆಯಲ್ಲಿ Pak ISI Cell–Coimbatore LTTE-TOSIS ಎಂದು ನಮೂದಿಸಲಾಗಿದ್ದು, ಭಯೋತ್ಪಾದಕ ಸಂಘಟನೆಗಳ ಹೆಸರನ್ನು ಬಳಸಿಕೊಳ್ಳಲಾಗಿತ್ತು.
ಬೆದರಿಕೆ ಮೇಲ್‌ನಲ್ಲಿ ತಮಿಳುನಾಡಿನ ರಾಜಕೀಯ ತಂತ್ರಗಾರರಾದ ಪ್ರಶಾಂತ್ ಕಿಶೋರ್ ಮತ್ತು ಸುನಿಲ್ ಕನುಗೋಲು ಸೂಚನೆಯಂತೆ ತಮಿಳುನಾಡು ಸರ್ಕಾರ ಮಾಧ್ಯಮಗಳನ್ನು ನಿಯಂತ್ರಿಸುತ್ತಿದೆ. ಅಲ್ಲದೆ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಅಜೆಂಡಾ ಜಾರಿಗೆ ತರಲು ಕೆಲವು ಹಿರಿಯ ಪತ್ರಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಮೇಲ್‌ನಲ್ಲಿ ಪತ್ರಕರ್ತರು ಮತ್ತು ಬಾಲಕಿಯರ ಹೆಸರನ್ನು ಉಲ್ಲೇಖಿಸಿ, ಡಿಎಂಕೆಯ ಜಾಫರ್ ಸಾದಿಕ್ ಮೂಲಕ ಅನೈತಿಕ ಚಟುವಟಿಕೆ ನಡೆಯುತ್ತಿವೆ ಎಂಬ ಸ್ಫೋಟಕ ಆರೋಪ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.ಬೆದರಿಕೆ ಸಂದೇಶ ನೋಡುತ್ತಿದ್ದಂತೆಯೇ ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರಲ್ಲಿ ಭೀತಿ ಆವರಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಬಾಂಬ್ ಪತ್ತೆ ದಳ ಮತ್ತು ಶ್ವಾನ ದಳದೊಂದಿಗೆ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು. ನ್ಯಾಯಾಲಯದ ಒಳಾಂಗಣ, ಹೊರ ಆವರಣ ಹಾಗೂ ವಾಹನ ನಿಲುಗಡೆ ಪ್ರದೇಶಗಳಲ್ಲಿ ಕೂಲಂಕುಷ ಪರಿಶೀಲನೆ ನಡೆಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಕಲಾಪ ಕೆಲಕಾಲ ಮುಂದೂಡಲಾಯಿತು.
ಹಿಂದೆಯೂ ಬಂದಿತ್ತು ಬೆದರಿಕೆಈ ಹಿಂದೆ ಭಟ್ಕಳ ಮತ್ತು ಕಾರವಾರ ತಹಶೀಲ್ದಾರ್ ಕಚೇರಿಗೂ ಇದೇ ಮಾದರಿಯ ಬಾಂಬ್ ಬೆದರಿಕೆ ಸಂದೇಶ ಬಂದಿದ್ದವು. ಆ ಮೇಲ್ ಇಮೇಲ್‌ಗಳಲ್ಲೂ ಡಿಎಂಕೆ ವಿಚಾರವನ್ನೇ ಪ್ರಸ್ತಾಪಿಸಲಾಗಿತ್ತು. ಸದ್ಯ ಪೊಲೀಸರು ವಿಪಿಎನ್ ಜಾಲದ ಜಾಡು ಹಿಡಿದು ನೈಜ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.