ಹಾವೇರಿ (ಶಿಗ್ಗಾಂವಿ): ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಒಂದೇ ಒಂದೂ ಮನೆ ಕಟ್ಟಿಸಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಮಂಗಳವಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಕ್ಷಿ ಸಮೇತ ತಿರುಗೇಟು ನೀಡಿದ್ದಾರೆ. ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹದ ಸಂದರ್ಭದಲ್ಲಿ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ತಮ್ಮ ಅವಧಿಯಲ್ಲಿ ₹೫ ಲಕ್ಷ ನೀಡಿ ನಿರ್ಮಿಸಿದ ಮನೆಯ ಮುಂದೆ ಫಲಾನುಭವಿಯೊಂದಿಗೆ ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.ಸಿದ್ದರಾಮಯ್ಯ ಅವರೇ `ನೀವು ಹುಲಗೂರಿನಲ್ಲಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯಲ್ಲಿ ಒಂದೂ ಮನೆ ಕಟ್ಟಿಲ್ಲ ಎಂದು ಹೇಳಿದ್ದೀರಿ, ಅದು ಹಸಿ ಸುಳ್ಳು, ಇಲ್ಲಿ ನಿಮ್ಮ ಕಣ್ಣ ಮುಂದೆ ಇದೆ. ೨೦೨೧-೨೨ರಲ್ಲಿ ಪ್ರವಾಹ ಬಂದಂತಹ ಸಂದರ್ಭದಲ್ಲಿ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ಸುಮಾರು ಮುನ್ನೂರು ಮನೆಗಳನ್ನು ಕಟ್ಟಿದ್ದೇವೆ. ಬಸವಣ್ಣೆಮ್ಮ ಮಾಳಪ್ಪನವರು ಅವರು ₹೫ ಲಕ್ಷ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ನಮ್ಮ ಬಿಜೆಪಿ ಸರ್ಕಾರ ಇದ್ದಾಗ ೨೦೨೧-೨೨ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರ ಸುಮಾರು ೧೨,೫೦೦ ಮನೆಗಳನ್ನು ಶಿಗ್ಗಾಂವಿ ಕ್ಷೇತ್ರದಲ್ಲಿ ಕಟ್ಟಿದ್ದೇವೆ. ಇದೇ ರೀತಿ ನಾವು ಕಟ್ಟಿಸಿರುವ ಎಲ್ಲರ ಮನೆಗಳ ಮುಂದೆ ನಿಂತು ಪೋಟೊಗಳನ್ನು ಕಳುಹಿಸುತ್ತೇನೆ. ನೀವು ಹಸಿ ಸುಳ್ಳು ಹೇಳುವುದನ್ನು ಬಿಡಿ, ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಇರಲಿ, ಹಸಿ ಸುಳ್ಳು ಹೇಳಬೇಡಿ, ನಂಬುವಂತಹ ಸುಳ್ಳು ಹೇಳಿ, ನಮ್ಮ ಕೆಲಸಕ್ಕೆ ಪುರಾವೆ ಇಲ್ಲಿದೆ ಎಂದು ಹೇಳಿದರು.ಫಲಾನುಭವಿ ಬಸವಣ್ಣೆಮ್ಮ ಮಾಳಪ್ಪನವರ ಮಾತನಾಡಿ, ನಮಗ ಮನಿ ಇರಲಿಲ್ಲರಿ, ಬಸವರಾಜ ಬೊಮ್ಮಾಯಿ ಅವರು ₹೫ ಲಕ್ಷದ ಮನೆ ಕಟ್ಟಿಸಿ ಕೊಟ್ಟಿದ್ದಾರೆ. ಹಿರೇಮಣಕಟ್ಟಿಯಲ್ಲಿ ಮುನ್ನೂರು ಮನೆ ಕಟ್ಟಿಸಿಕೊಟ್ಟಿದ್ದಾರೆ. ಅವರಿಂದಾಗಿ ನಾವು ಸೂರು ಕಂಡುಕೊಂಡಿದ್ದೇವೆ ಎಂದು ಹೇಳಿದರು.
ಒಂದೂ ಮನೆ ಕಟ್ಟಿಲ್ಲ ಎಂದ ಸಿಎಂಗೆ ಸಾಕ್ಷಿ ಒದಗಿಸಿದ ಸಂಸದ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಒಂದೇ ಒಂದೂ ಮನೆ ಕಟ್ಟಿಸಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಮಂಗಳವಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಕ್ಷಿ ಸಮೇತ ತಿರುಗೇಟು ನೀಡಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.