ಸಾರಾಂಶ
ಹಾವೇರಿ (ಶಿಗ್ಗಾಂವಿ): ಶಿಗ್ಗಾಂವಿ ಕ್ಷೇತ್ರದ ತಿಮ್ಮಾಪುರ ಗ್ರಾಮದಲ್ಲಿ ಪ್ರವಾಹ ಬಂದಾಗ ಮನೆ ಬಿದ್ದು ಬಳಿಕ ₹೫ ಲಕ್ಷ ಮೊತ್ತದಲ್ಲಿ ಮನೆ ನಿರ್ಮಿಸಿಕೊಂಡಿರುವ ಮಲ್ಲೇಶ್ವಪ್ಪ ದುರಪ್ಪನವರ ನೂತನ ಮನೆಗೆ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಶುಕ್ರವಾರ ಭೇಟಿ ನೀಡಿದರು.
ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಮಲ್ಲೇಶಪ್ಪ ದುರಪ್ಪನವರ ಅವರಿಗೆ ಮನೆ ನಿರ್ಮಾಣಕ್ಕೆ ಐದು ಲಕ್ಷ ರು. ನೀಡಿದ್ದರು. ಇಂದು ಅವರ ನೂತನ ಮನೆ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, ತಿಮ್ಮಾಪುರ ಗ್ರಾಮದ ಮಲ್ಲೇಶ್ವಪ್ಪ ದುರಪ್ಪನವರ ಅವರ ಮನೆ ಪ್ರವಾಹದಲ್ಲಿ ಬಿದ್ದಿತ್ತು. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿ, ಐದು ಲಕ್ಷ ರು. ಮನೆ ಮಂಜೂರು ಮಾಡಿದ್ದೆ. ಅವರ ಸತತ ಪರಿಶ್ರಮದ ಫಲ ಸುಂದರ ಮನೆ ಕಟ್ಟಿಕೊಂಡಿದ್ದಾರೆ.
ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಇವತ್ತು ಅವರು ಮನೆ ಗೃಹ ಪ್ರವೇಶ ಕಾರ್ಯಕ್ರಮ ಮಾಡಿದ್ದಾರೆ. ನನಗೂ ಆಹ್ವಾನ ನೀಡಿದ್ದರು. ಶಿಗ್ಗಾಂವಿ ಕ್ಷೇತ್ರದಲ್ಲಿ ಈ ರೀತಿ ಸಾವಿರಾರು ಮನೆ ನಿರ್ಮಾಣ ಮಾಡಿದ್ದೇವೆ. ಆದರೆ, ಒಂದೂ ಮನೆ ಕಟ್ಟಿಲ್ಲ ಎಂದು ಆರೋಪ ಮಾಡುವವರು ಹೇಳುತ್ತಿರುವುದು ಸುಳ್ಳು ಎನ್ನುವುದಕ್ಕೆ ಈ ಮನೆ ಸಾಕ್ಷಿ ಎಂದು ಹೇಳಿದರು.