ಶಿಗ್ಗಾಂವಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಬೊಮ್ಮಾಯಿ ಅಪಪ್ರಚಾರ

| Published : Nov 13 2024, 12:01 AM IST

ಶಿಗ್ಗಾಂವಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಬೊಮ್ಮಾಯಿ ಅಪಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ರೌಡಿಶೀಟರ್ ಪ್ರಕರಣವಿದೆ ಎಂದು ಬಸವರಾಜ ಬೊಮ್ಮಾಯಿ‌ ಆರೋಪಿಸಿದ್ದು, ಹಾವೇರಿ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಒತ್ತಡ ತಂದು‌ ಹೇಳಿಕೆ ಬದಲಿಸಲಾಗಿದೆ.

ಹುಬ್ಬಳ್ಳಿ:

ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ‌ಅಭ್ಯರ್ಥಿ‌ ಬಗ್ಗೆ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ‌ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಈ ಕೂಡಲೇ ಅವರು ನೀಡಿರುವ ಹೇಳಿಕೆ ಹಿಂಪಡೆಯಬೇಕು ಎಂದು ಸಚಿವ ಶಿವಾನಂದ ಪಾಟೀಲ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ರೌಡಿಶೀಟರ್ ಪ್ರಕರಣವಿದೆ ಎಂದು ಬಸವರಾಜ ಬೊಮ್ಮಾಯಿ‌ ಆರೋಪಿಸಿದ್ದು, ಹಾವೇರಿ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಒತ್ತಡ ತಂದು‌ ಹೇಳಿಕೆ ಬದಲಿಸಲಾಗಿದೆ. ಚುನಾವಣಾ ಅಧಿಕಾರಿ‌ ಮೇಲೆಯೂ ಪ್ರಭಾವ ಬೀರಲಾಗಿದೆ ಎಂದು ಆರೋಪಿಸಿದ್ದಾರೆ. ಯಾರು ಪ್ರಭಾವ ಬೀರಿದ್ದಾರೆ ಎಂಬುದನ್ನು ಬೊಮ್ಮಾಯಿ ಅವರು ಬಹಿರಂಗ‌ಪಡಿಸಲಿ. ಒಂದು ವೇಳೆ ನಾನು‌ ಪ್ರಭಾವ ಬೀರಿದ್ದೇನೆ ಎಂಬುದು‌ ಸಾಬೀತು‌ಪಡಿಸಿದಲ್ಲಿ ರಾಜಕೀಯ‌ ನಿವೃತ್ತಿ ಹೊಂದುವುದಾಗಿ ತಿಳಿಸಿದರು.

ಬಹಿರಂಗಗೊಳಿಸಲಿ:

ಕಳೆದ ಒಂದೂವರೆ ವರ್ಷದಿಂದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನಾಗಲಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಯಾರು‌ ಪ್ರಭಾವ ಬೀರಿದ್ದಾರೆ ಎಂಬುದನ್ನು ಬೊಮ್ಮಾಯಿ ಬಹಿರಂಗಗೊಳಿಸಲಿ. ಎಸ್ಪಿ ಅವರ ಹೆಸರನ್ನು‌ ದುರ್ಬಳಕೆ ಮಾಡಿಕೊಂಡಿದ್ದು ತಪ್ಪು. ಮುಸ್ಲಿಂ ಅಭ್ಯರ್ಥಿ ಎಂಬ ಕಾರಣಕ್ಕೆ ಈ ರೀತಿ‌ಯಾಗಿ ಆರೋಪಿಸಲಾಗುತ್ತಿದೆ ಎಂದು ಹರಿಹಾಯ್ದರು.

ಈ ಹಿಂದೆಯೂ ಅಜ್ಜಂಪುರ ಖಾದ್ರಿ ಸ್ಪರ್ಧಿಸಿದ ವೇಳೆಯೂ ಖಾದ್ರಿ ಅವರು ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು‌ ಆರೋಪಿಸಿ ಬಸವರಾಜ ಬೊಮ್ಮಾಯಿ‌ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದರು. ಇದೀಗ ತಮ್ಮ ಪುತ್ರನ ಗೆಲುವಿಗೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ರೌಡಿಶೀಟರ್ ಪ್ರಕರಣವಿದೆ ಎಂದು ಹೇಳುವ ಮೂಲಕ, ಹಿಂದು-ಮುಸ್ಲಿಂ ವಿಚಾರ ಕೆದಕುವ ಕೆಲಸ ಮಾಡಿರುವುದು ದುರ್ದೈವದ ಸಂಗತಿ ಎಂದರು.

ಸೋಲಿನ ಭೀತಿ:

ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಸುಳ್ಳು ಸುದ್ದಿ ಪ್ರಚಾರ ಮಾಡುವುದರಿಂದ ಅಭ್ಯರ್ಥಿ ಹಾಗೂ ಕ್ಷೇತ್ರದ ಜನತೆ ವಿಚಲಿತರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಒಬ್ಬ ಉಸ್ತುವಾರಿ ಸಚಿವನಾಗಿ ನನಗೆ ಆತಂಕವಾಗುತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲಿನ ಭೀತಿಯ ಬಗ್ಗೆ ಸಚಿವರು ಕಳವಳ ವ್ಯಕ್ತಪಡಿಸಿದರು.

ಕೆಎಚ್‌ಡಿಸಿ-ಕೆಎಸ್‌ಐಡಿಸಿ ವಿಲೀನ:

ವಿದ್ಯಾ ವಿಕಾಸ ಯೋಜನೆಯ ಅಡಿ ಶಾಲಾ ಮಕ್ಕಳಿಗೆ ವಿತರಿಸುವ ಸಮವಸ್ತ್ರ ಬಟ್ಟೆ ತಯಾರಿಸಲು ನೇಕಾರರಿಗೆ ಕೆಲಸ ಕೊಡದಿದ್ದರಿಂದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಕೆಎಚ್‌ಡಿಸಿ) ನಷ್ಟದಲ್ಲಿದೆ. ಇದಕ್ಕೆ ಎಲ್ಲ ಸರ್ಕಾರಗಳು ಹೊಣೆ. ನಷ್ಟದಲ್ಲಿರುವ ಕೆಎಚ್‌ಡಿಸಿ ಹಾಗೂ ಕೆಎಸ್‌ಐಡಿಸಿಯನ್ನು ವಿಲೀನಗೊಳಿಸುವ ಉದ್ದೇಶ ಸರ್ಕಾರದ ಮುಂದಿದೆ ಎಂದು ಶಿವಾನಂದ ಪಾಟೀಲ ಸ್ಪಷ್ಟಪಡಿಸಿದರು.