ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಎಲ್ಲೆಂದರಲ್ಲಿ ಅಸ್ಥಿ ವಿಸರ್ಜನೆ, ತ್ಯಾಜಗಳನ್ನು ಬಿಡುತ್ತಿರುವುದರಿಂದ ಕಾವೇರಿ ನದಿ ನೀರು ಮಲೀನವಾಗುತ್ತಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಕಾವೇರಿ ನದಿಯ ಸ್ವಚ್ಛತೆ ಕಾಪಾಡುವಂತೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪಟ್ಟಣದ ಪುರಸಭೆ ಕಚೇರಿಗೆ ಹಿಂದು ಜಾಗರಣಾ ವೇದಿಕೆ ಸಂಚಾಲಕ ಚಂದನ್ ನೇತೃತ್ವದಲ್ಲಿ ಕಾರ್ಯಕರ್ತರು ಭೇಟಿ ನೀಡಿ, ಮುಖ್ಯಾಧಿಕಾರಿ ಎಂ.ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು.
ಪುರಸಭಾ ವ್ಯಾಪ್ತಿ ಕಾವೇರಿ ನದಿ ತೀರದಲ್ಲಿ ಎಲ್ಲೆಂದರಲ್ಲಿ ಅಸ್ಥಿ ವಿಸರ್ಜಿಸಿ, ತ್ಯಾಜ್ಯ ವಸ್ತುಗಳ ನದಿಯಲ್ಲಿ ಬಿಟ್ಟು ನೀರು ಮಲೀನಗೊಳ್ಳುತ್ತಿದೆ. ಜಮೀನುಗಳಲ್ಲಿ ಅಕ್ರಮವಾಗಿ ಅಸ್ಥಿ ಪೂಜಾ ಶೆಡ್‌ಗಳ ನಿರ್ಮಿಸಿ ಧಾರ್ಮಿಕ ಕಾರ್ಯಕ್ಕೆ ಬಂದವರಿಂದ ವಸೂಲಾತಿ ನಡೆಯುತ್ತಿದೆ. ಕೂಡಲೇ ಅವುಗಳ ತೆರವು ಮಾಡಿ ಧಾರ್ಮಿಕ ಕಾರ್ಯಕ್ಕೆ ಬರುವರಿಗೆ ಅನುಕೂಲಗಳ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಜೊತೆಗೆ ಪುರಸಭೆ ವತಿಯಿಂದಲೇ ಪೂರ್ವಾಧಿ ಕಾಲದಿಂದ ನಡೆದು ಬಂದ, ಪಶ್ಚಿಮವಾಹಿನಿ ಹಾಗೂ ಕಾವೇರಿ ಸಂಗಮ ಸ್ಥಳದಲ್ಲೇ ಅಸ್ಥಿ ವಿಸರ್ಜನೆಗೆ ಜಾಗ ಕಲ್ಪಿಸಿ ಆ ಸ್ಥಳಲ್ಲಿ ಮೂಲ ಸೌಕರ್ಯಗಳ ಕಲ್ಪಿಸಬೇಕು. ಅಲ್ಲದೇ, ನಿಮ್ಮ ಸಿಬ್ಬಂದಿ ನೇಮಕ ಮಾಡಿ ನದಿಗೆ ತ್ಯಾಜ್ಯಗಳು, ಬಟ್ಟೆಗಳನ್ನು ನದಿಯಲ್ಲಿ ವಿಸರ್ಜಿಸದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಧಾರ್ಮಿಕ ಕ್ರಿಯಾ ಪೂಜೆ ನಡೆಸುವ ಪುರೋಹಿತರನ್ನು ನೇಮಕ ಮಾಡಿ ಅವರಿಗೆ ಗುರುತಿನ ಪತ್ರ ನೀಡಿ, ಅಸ್ಥಿ ವಿಸರ್ಜನೆಗೆ ಇಂತಿಷ್ಟು ಶುಲ್ಕ ನಿಗಧಿ ಮಾಡಿ ರಶೀದಿ ಹಾಕಿ ಪುರಸಭೆಗೆ ಆದಾಯ ಬರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿ ಬಳಿಕ ಮುಖ್ಯಾಧಿಕಾರಿ ಎಂ.ರಾಜಣ್ಣ ಮಾತನಾಡಿ, ಕಾವೇರಿ ನದಿಗೆ ಅನುಪಯುಕ್ತ ವಸ್ತುಗಳು ಸೇರಿದಂತೆ ಅಸ್ಥಿ ವಿರ್ಜನೆ ಜೊತೆ ತ್ಯಾಜ್ಯಗಳ ಬಿಟ್ಟು ನದಿ ನೀರು ಮಲೀನ ಕುರಿತು ಅದರ ಸಂರಕ್ಷಣೆಗೆ ವಿಷಯವಾಗಿ ಹೈಕೋರ್ಟ್‌ನಲ್ಲಿ ಕುಶಾಲ್ ಕುಮಾರ್ ಕೌಶಿಕ್ ಮತ್ತಿತರರು ರಿಟ್ ಅರ್ಜಿ ಸಲ್ಲಿದ್ದಾರೆ ಎಂದರು.
ಹೈಕೋರ್ಟ್ ಆದೇಶದಂತೆ ಮಂಡ್ಯ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಅಧ್ಯಕ್ಷತೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಮಾರ್ಗದರ್ಶನದಲ್ಲಿ ತಹಶಿಲ್ದಾರ್, ಪುರಸಭೆ ಅಧ್ಯಕ್ಷರು, ಸದಸ್ಯರ ಸಭೆ ನಡೆಸಲಾಗಿದೆ. ಈ ಸಮಸ್ಯೆ ಪರಿಹರಿಸಲು ನದಿ ಮಲೀನವನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಲು ರೂಪು ರೇಷೆಗಳ ರೂಪಿಸಿದ್ದು, ಸಾರ್ವಜನಿಕರ ಸಲಹೆ ಸೂಚನೆಗಳಿಗೂ ಒಂದು ತಿಂಗಳು ಅವಕಾಶ ನೀಡಲಾಗಿದೆ. ನಂತರ ಯಾವುದೇ ಸಮಸ್ಯೆಗಳು ಬಾರದಂತೆ ಬರುವ ಪ್ರವಾಸಿಗರು ಧಾರ್ಮಿಕ ಕಾರ್ಯ ನಡೆಸುವರಿಗೆ ಮೂಲ ಸೌಕರ್ಯಗಳಿಗೆ ಒತ್ತು ನೀಡಲು ಡಿಪಿಆರ್ ಸಿದ್ದತೆ ಮಾಡಿ ಸರ್ಕಾರದ ಗಮನಕ್ಕೆ ನಂತರ ಕಾರ್ಯರೂಪಗೊಳಿಸಲಾಗುತ್ತದೆ ಎಂದರು.ಈ ವೇಳೆ ವೇದಿಕೆ ಸದಸ್ಯರಾದ ಲಕ್ಷ್ಮಿನಾರಾಯಣ, ರಾಘು, ಚೇತನ್ ಸೇರಿದಂತೆ ಇತರರು ಮನವಿ ಸಲ್ಲಿಸಿದರು.