ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗ ಚಿತ್ರದುರ್ಗ ತಾಲೂಕಿನ ಚೀಳಂಗಿ ಕೆರೆ ಭರ್ತಿಯಾಗಿದೆ. ಒಂದೆಡೆ ರೈತರ ಮೊಗದಲ್ಲಿ ಸಂತಸ ಮೂಡಿದ್ದರೆ, ಕೆರೆಯ ಏರಿಯಲ್ಲಿ ಬೊಂಗು ಬಿದ್ದು ನೀರು ಪೋಲಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.200 ಎಕರೆ ವಿಸ್ತೀರ್ಣದ ಚೀಳಂಗಿ ಕೆರೆಗೆ ಓಬವ್ವ ನಾಗತಿಹಳ್ಳಿ ಕಡೆಯಿಂದ ನೀರು ಹರಿದು ಬರುತ್ತದೆ. ಈ ಕೆರೆ ತುಂಬಿರುವುದನ್ನು ಇತ್ತೀಚಿನ ವರ್ಷದಲ್ಲಿ ಯಾರೂ ನೋಡಿಲ್ಲ. ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭರಮಸಾಗರ ಏತ ನೀರಾವರಿ ಮೂಲಕ ಈ ಕೆರೆಗ ನೀರು ಹಾಯಿಸಿದ್ದರು. ವಾರದಿಂದ ಸುರಿದ ಮಳೆಯಿಂದಾಗಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಕೆರೆ ಏರಿಗೆ ಹಾನಿಯಾಗಿದೆ.ಶನಿವಾರ ಬೆಳಿಗ್ಗೆ ಕೆರೆ ಏರಿಯಲ್ಲಿ ಬೊಂಗು ಬಿದ್ದು ನೀರು ರಭಸವಾಗಿ ಹೊರ ಹೋಗಲು ಆರಂಭಿಸಿದೆ. ರೈತರೇ ಜಾಗೃತರಾಗಿ ಬಿದ್ದಿರುವ ತೂತು ಮುಚ್ಚಲು ಮುಂದಾಗಿದ್ದಾರೆ. ಮುನ್ನೂರಕ್ಕೆ ಹೆಚ್ಚುಮರಳು ಚೀಲಗಳನ್ನು ಕೆರೆ ಏರಿ ಒಳ ಹಾಗೂ ಹೊರ ಭಾಗದಲ್ಲಿ ಇಳಿಯ ಬಿಟ್ಟು ನೀರು ನಿಲ್ಲಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗದೇ ಹೋಗಿದೆ.
ಸುದ್ದಿ ತಿಳಿದು ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರಾದರೂ ತಕ್ಷಣಕ್ಕೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ಅನುದಾನದ ಕೊರತೆ ಕಾರಣಕ್ಕೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇಡೀ ಕೆರೆಯ ತುಂಬಾ ಸೀಮೆ ಜಾಲಿ ಗಿಡಗಳು ಬೆಳೆದಿದ್ದು, ನೀರಿನಲ್ಲಿ ಮುಳುಗಡೆಯಾಗಿವೆ. ಹಾಗಾಗಿ ಮರಳಿನ ಚೀಲಗಳ ಇಳಿ ಬಿಡುವುದೂ ಕೂಡಾ ಸಂಕಷ್ಟದ ಕೆಲಸವಾಗಿದೆ.ಕೆರೆಯ ಕೆಳಭಾಗದಲ್ಲಿ ದಲಿತರ ಕಾಲೋನಿ, 200 ಎಕರೆಯಷ್ಟು ಅಡಿಕೆ ತೋಟವಿದೆ. ಹಾಗೇನಾದರೂ ಅವಘಡ ಸಂಭವಿಸಿ, ಕೆರೆ ಏರಿ ಕೊಚ್ಚಿಕೊಂಡು ಹೋದಲ್ಲಿ ದಲಿತರ ಮನೆ, ಅಡಿಕೆ ತೋಟ ಉಳಿಯುವುದು ಕಷ್ಟ ಸಾಧ್ಯ. ಅಷ್ಟರ ಮಟ್ಟಿಗೆ ಅಪಾಯಕಾರಿ ಸಂದೇಶವ ಚೀಳಂಗಿ ಕೆರೆ ರವಾನಿಸಿದೆ.
ಚೀಳಂಗಿ ಕೆರೆ ಏರಿ ದುರಸ್ತಿಗೆ ಸಂಬಂಧಿಸಿದಂತೆ ಕನ್ನಡಪ್ರಭದೊಂದಿಗೆ ಮಾತನಾಡಿದ ಶಾಸಕ ಎಂ. ಚಂದ್ರಪ್ಪ, ಗ್ರಾಮದ ರೈತರು ಬಂದು ತಮ್ಮನ್ನು ಭೇಟಿಯಾಗಿದ್ದಾರೆ. ಸರ್ಕಾರಿ ಅನುದಾನ ಕಾಯದೇ ಸ್ವಂತ ದುಡ್ಡು ಹಾಕಿ ದುರಸ್ತಿ ಕೆಲಸ ಮಾಡುತ್ತೇನೆ. ನೀರು, ರಸ್ತೆ ವಿಚಾರವಾಗಿ ನನ್ನದೇ ಆದ ಬದ್ಧತೆಗಳಿವೆ ಎಂದು ರೈತರಿಗೆ ಭರವಸೆ ನೀಡಿದ್ದಾರೆ.ನಾವು ಚಿಕ್ಕವಯಸ್ಸಿನಿಂದ ನೋಡುತ್ತಿದ್ದೇವೆ. ಕೆರೆ ಎಂದೂ ತುಂಬಿದ ನಿದರ್ಶನಗಳಿಲ್ಲ. ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಭರಮಸಾಗರ ಏತ ನೀರಾವರಿ ಮೂಲಕ ಕೆರೆ ತುಂಬಿಸಲು ಪ್ರಯತ್ನಿಸಿದ್ದರು . ಏತ ನೀರಾವರಿ ಜೊತೆಗೆ ಮಳೆ ನೀರು ಸೇರಿ ಕೆರೆ ಅಪಾಯದ ಮಟ್ಟ ತಲುಪಿದೆ. ಜಿಲ್ಲಾ ಪಂಚಾಯಿತಿ ಮೊದಲೇ ಎಚ್ಚೆತ್ತು ಕೆರೆ ಏರಿ ದುರಸ್ತಿ ಮಾಡಿದ್ದರೆ ಅಪಾಯ ಎದುರಾಗುತ್ತಿರಲಿಲ್ಲ.
ರೈತ ಲೋಕೇಶಪ್ಪ