ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡರ ಪುಸ್ತಕ ಮನೆಯನ್ನು ಒಂದು ಕ್ರಿಯಾಶೀಲ ಸಾಂಸ್ಕೃತಿಕ ಕೇಂದ್ರವಾಗಿ, ಪ್ರತ್ಯೇಕ ಸ್ವಾಯತ್ತ ಸಂಸ್ಥೆಯಾಗಿ ರೂಪಿಸುವ ಅಗತ್ಯವಿದೆ ಎಂದು ಸಾಹಿತಿ ಟಿ.ಸತೀಶ್ ಜವರೇಗೌಡ ಸಲಹೆ ನೀಡಿದರು.ಪಟ್ಟಣದಲ್ಲಿ ಸಂಜಯ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡರನ್ನು ಅಭಿನಂದಿಸಿ ಮಾತನಾಡಿ, ತಲೆಮಾರಿನಿಂದ ತಲೆಮಾರಿಗೆ ಜ್ಞಾನ, ಅನುಭವ, ಮಾಹಿತಿಗಳನ್ನು ರವಾನಿಸುವಂತಹ ಅಸಂಖ್ಯಾತ ಅಮೂಲ್ಯ ಪುಸ್ತಕಗಳನ್ನು ಸಂರಕ್ಷಣೆ ಮಾಡುವ ದಿಕ್ಕಿನಲ್ಲಿ ಕ್ರಿಯಾತ್ಮಕವಾದ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.
ಅಂಕೇಗೌಡರು ತಮ್ಮ ಸಂಪಾದನೆಯ ಬಹುತೇಕ ಭಾಗವನ್ನು ಪುಸ್ತಕಗಳನ್ನು ಖರೀದಿಸಲು ವಿನಿಯೋಗಿಸಿದ್ದಾರೆ. ನಿಜಕ್ಕೂ ಮಾದರಿ ಮತ್ತು ಪ್ರೇರಣಾದಾಯಕ ಕಾರ್ಯ. ಪುಸ್ತಕಗಳ ಜೊತೆಗೆ ಅಮೂಲ್ಯವಾದ ನೋಟುಗಳು, ನಾಣ್ಯಗಳು, ಅಂಚೆ ಚೀಟಿಗಳು ಹಾಗೂ ವಿವಿಧ ಪತ್ರಿಕೆಗಳು ಮತ್ತು ಸ್ಮರಣ ಸಂಚಿಕೆಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪುಸ್ತಕ ಮನೆಯನ್ನು ಸಂಗ್ರಹಾಲಯವಾಗಿಯೂ ರೂಪಿಸುವ ಅವಕಾಶಗಳಿವೆ ಎಂದು ಪ್ರತಿಪಾದಿಸಿದರು.ಪುಸ್ತಕಗಳ ರಾಶಿ ಮಿತಿ ಮೀರಿದ್ದು, ಓದುಗರು ಕೂತು ಓದಲಾಗದ ಸ್ಥಿತಿ ಇದೆ. ಇಷ್ಟದ ಅಥವಾ ಅಗತ್ಯದ ಪುಸ್ತಕ ಹುಡುಕಾಟ ಕಷ್ಟವಾಗಿದೆ. ಪುಸ್ತಕ ಮನೆ ಗೋದಾಮು ಆಗಿ ಬದಲಾಗುತ್ತಿದೆ. ಅಸಂಖ್ಯಾತ ಪುಸ್ತಕಗಳನ್ನು ಗಣಕೀಕರಣಗೊಳಿಸುವ ಕಾರ್ಯ ತುರ್ತಾಗಿ ಆಗಬೇಕಿದೆ ಎಂದರು.
ಅಭಿನಂದನೆ ಸ್ವೀಕರಿಸಿದ ಅಂಕೇಗೌಡರು ಮಾತನಾಡಿ, ಪ್ರಪಂಚದ ಎಲ್ಲಾ ಜ್ಞಾನವನ್ನು ಒಂದೇ ಸೂರಿನಡಿ ತರುವ ತವಕ ನನ್ನದು. ಅರ್ಧ ಶತಮಾನದ ಪರಿಶ್ರಮದಿಂದ ಪುಸ್ತಕ ಮನೆ ಸ್ಥಾಪನೆಗಾಗಿ ದುಡಿದಿರುವೆ. ಮುಂದೆ ನಳಂದ ವಿಶ್ವವಿದ್ಯಾಲಯದ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಆಸೆ ಇದೆ ಎಂದರು.
ಹಿರಿಯ ಗಾಂಧಿವಾದಿ ಡಾ.ಬಿ. ಸುಜಯ್‌ಕುಮಾರ್ ಮಾತನಾಡಿ, ಸಾಮಾನ್ಯ ರೈತ ಕುಟುಂಬದ ವ್ಯಕ್ತಿ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹಿಸಿರುವುದು ಸಾಮಾನ್ಯ ಸಾಧನೆಯಲ್ಲ. ಪ್ರಶಸ್ತಿಗಿಂತ ಮುಖ್ಯವಾದದ್ದು ಅವರು ನಿರ್ಮಾಣ ಮಾಡಿದ ಪುಸ್ತಕದ ಮನೆ ಎಂದರು.
ಕಾರ್ಯಕ್ರಮದಲ್ಲಿ ಸಂಜಯ ಪ್ರಕಾಶನದ ಸಂಸ್ಥಾಪಕ ಎಸ್.ಎಂ.ಶಿವಕುಮಾರ್, ಹಂಪಿ ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಮಹದೇವ್, ರಂಗಕರ್ಮಿ ಚಂದ್ರು ಮಂಡ್ಯ, ಮಹಿಳಾ ಸಾಂತ್ವನದ ಸಂಸ್ಥಾಪಕಿ ಶೀಲಾ ನಂಜುಂಡಯ್ಯ, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್, ಮುಸ್ಲಿಂ ಸೌಹಾರ್ದ ವೇದಿಕೆ ಖಜಾಂಚಿ ಆಯೂಬ್, ಶ್ರೀರಂಗನಾಯಕಿ ಸ್ತ್ರೀ ಸಮಾಜದ ಸದಸ್ಯರಾದ ಸುಮಂಗಲ, ಸುಧಾ, ಶಿಕ್ಷಕಿ ಎಚ್.ಜೆ. ಶೀಲಾ, ಕನ್ನಡ ಪ್ರಾಧ್ಯಾಪಕ ಶಿವಕುಮಾರ್ ಕಾರೇಕುರ, ಡಾ.ಬಿ.ಕೆ.ರಾಮು, ಪ್ರಾಧ್ಯಾಪಕ ಬ್ಯಾಡರಹಳ್ಳಿ ಧನಂಜಯ್, ಸಾಹಿತಿ ಕ್ಯಾತನಹಳ್ಳಿ ಚಂದ್ರಣ್ಣ, ವಕೀಲ ಎಸ್.ಆರ್. ಸಿದ್ದೇಶ್, ಹೋರಾಟಗಾರ ಚಿಕ್ಕತಮ್ಮೆಗೌಡ, ಸದಾನಂದ, ಸುರೇಶ್ ಇದ್ದರು.