ಸಾರಾಂಶ
ಬೆಂಗಳೂರು : ಕಬ್ಬನ್ ಉದ್ಯಾನದಲ್ಲಿ ಬ್ಲೈಂಡ್ ಡೇಟ್‌ಗೆ ಅವಕಾಶ ಕಲ್ಪಿಸುವುದಾಗಿ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದ ಬುಕ್ ಮೈ ಶೋ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ತೋಟಗಾರಿಕೆ ಇಲಾಖೆ ಆ ಸಂಸ್ಥೆ ವಿರುದ್ಧ ಕೇಸು ದಾಖಲಿಸಿದೆ.
ಬುಕ್ ಮೈ ಶೋ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬ್ಲೈಂಡ್ ಡೇಟ್‌ಗೆ ಎಂದು ಆ.2ರಿಂದ 31ರವರೆಗೆ ನೋಂದಣಿಗೆ ಅವಕಾಶ ನೀಡಿದ್ದು, ಯುವತಿಯರಿಗೆ 199 ರು. ಮತ್ತು ಯುವಕರಿಗೆ 1499 ರು.ಗಳ ಪ್ರವೇಶ ಶುಲ್ಕ ನಿಗದಿಪಡಿಸಿತ್ತು. ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಬ್ಬನ್‌ಪಾರ್ಕ್‌ನಲ್ಲಿ ಪರಸ್ಪರರ ಭೇಟಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಿ ಬುಕ್ಕಿಂಗ್ ಮಾಡಿಕೊಳ್ಳುತ್ತಿತ್ತು.
ಈ ವಿಚಾರ ತಡವಾಗಿ ತಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ಬುಕ್‌ಮೈ ಶೋ ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿರುವುದಾಗಿ ಕಬ್ಬನ್ ಉದ್ಯಾನವನದಲ್ಲಿ ನಿತ್ಯವು ಪೋಷಕರು ತಮ್ಮ ಮಕ್ಕಳೊಂದಿಗೆ ಆಗಮಿಸಿ ದಿನ ಕಳೆಯುತ್ತಾರೆ. ಈ ಉದ್ಯಾನವನ ಸಾಂಸ್ಕೃತಿಕ ಚಟುವಟಿಕೆಯ ತಾಣವೂ ಆಗಿದೆ. ಇಲ್ಲಿಯೇ ಕೇಂದ್ರ ಗ್ರಂಥಾಲಯ, ಬಾಲಭವನ, ಪಕ್ಕದಲ್ಲಿಯೇ ಹೈಕೋರ್ಟ್, ಎದುರಿಗೆ ವಿಧಾನಸೌಧ, ಸುತ್ತಮುತ್ತ ವಿವಿಧ ಇಲಾಖೆಗಳ ಕಚೇರಿಗಳು ಇವೆ. ಇಂತಹ ಸಾರ್ವಜನಿಕವಾಗಿ ಮಹತ್ವ ಪಡೆದುಕೊಂಡಿರುವ ಉದ್ಯಾನದಲ್ಲಿ ತೀರಾ ಖಾಸಗಿ ವಿಚಾರವಾಗಿರುವ ಡೇಟಿಂಗ್‌ಗೆ ಬುಕ್ ಮೈಶೋ ಅವಕಾಶ ಕಲ್ಪಿಸಲು ಮುಂದಾಗಿರುವುದು ಪರಿಸರ ಪ್ರೇಮಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರನ್ನು ಕೆರಳಿಸಿದೆ.
ಉದ್ಯಾನದ ಹಿತಕ್ಕೆ ಧಕ್ಕೆಯಾಗುವುದರ ಜೊತೆಗೆ ಸಾರ್ವಜನಿಕರಿಗೂ ಮುಜುಗರ ಉಂಟಾಗುತ್ತದೆ ಎಂಬ ಕಾರಣಕ್ಕೆ ಕಳೆದ ಕೆಲವು ದಿನಗಳ ಹಿಂದಷ್ಟೇ ಕಬ್ಬನ್ ಉದ್ಯಾನದಲ್ಲಿ ರೀಲ್ಸ್, ಬೇಬಿ ಶವರ್, ಮಾಡೆಲಿಂಗ್, ಸಿನಿಮಾ, ಕಿರುತೆರೆ, ಪ್ರೀ ಮತ್ತು ಪೋಸ್ಟ್ ವೆಡ್ಡಿಂಗ್ ಶೂಟ್ಸ್ ಸೇರಿದಂತೆ ಇನ್ನಿತರ ಚಿತ್ರೀಕರಣಕ್ಕೆ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈಗ ಕಾನೂನು ಬಾಹಿರವಾಗಿ ಕಬ್ಬನ್‌ಪಾರ್ಕ್‌ನಲ್ಲಿ ಬ್ಲೈಂಡ್ ಡೇಟ್ ಚಟುವಟಿಕೆ ನಡೆಸಲು ಬುಕ್‌ಮೈ ಶೋ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳುತ್ತಾ, ಉದ್ಯಾನಕ್ಕೆ ಕೆಟ್ಟ ಹೆಸರು ತರಲು ಕಿಡಿಗೇಡಿಗಳು ಯತ್ನಿಸುತ್ತಿದ್ದಾರೆ. ಈಗಾಗಲೇ ಬುಕ್‌ಮೈ ಶೋ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಕಬ್ಬನ್‌ಪಾರ್ಕ್ ಉಪನಿರ್ದೇಶಕಿ ಜಿ.ಕುಸುಮಾ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಬ್ಲೈಂಡ್ ಡೇಟ್ ಚಟುವಟಿಕೆ ನಡೆಸಲು ಮುಂದಾಗಿದ್ದ ಬುಕ್‌ಮೈ ಶೋ ವಿರುದ್ಧ ದೂರು ನೀಡಿದ್ದೇವೆ. ಕಬ್ಬನ್‌ಪಾರ್ಕ್‌ನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ಕಾನೂನು ರೀತ್ಯ ಕ್ರಮ ಎದುರಿಸಬೇಕಾಗುತ್ತದೆ. ವಾಣಿಜ್ಯ ಉದ್ದೇಶದ ಯಾವುದೇ ಕಾರ್ಯಕ್ರಮ, ಸಾರ್ವಜನಿಕರಿಗೆ ಮುಜುಗರದ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ.
- ಡಾ.ಎಂ.ಜಗದೀಶ್, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ.