ಅರಕಲಗೂಡು ದಸರಾಗೆ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಉದ್ಘಾಟಕರು: ಶಾಸಕ ಎ.ಮಂಜು

| Published : Sep 30 2025, 12:00 AM IST

ಅರಕಲಗೂಡು ದಸರಾಗೆ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಉದ್ಘಾಟಕರು: ಶಾಸಕ ಎ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರಕ್ಕೆ ಸ್ವತಃ ಜಾತಿ ಗಣತಿ ನಡೆಸುವ ಅಧಿಕಾರವಿಲ್ಲ. ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ ನಡೆಯುತ್ತಿದೆ. ಆದರೆ ಅದನ್ನು ಜನರಿಗೆ ಜಾತಿ ಸಮೀಕ್ಷೆ ಎಂದು ತಪ್ಪಾಗಿ ತೋರಿಸಲಾಗುತ್ತಿದೆ .

ಕನ್ನಡಪ್ರಭ ವಾರ್ತೆ ಹಾಸನ

ಈ ಬಾರಿ ಅರಕಲಗೂಡು ದಸರಾ ಉತ್ಸವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆಗೆ ಪಾತ್ರರಾದ ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ದೀಪಾ ಭಾಸ್ತಿ ಅವರು ಉದ್ಘಾಟಿಸಲಿದ್ದಾರೆ ಎಂದು ಮಾಜಿ ಸಚಿವರು ಹಾಗೂ ಶಾಸಕ ಎ. ಮಂಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಅಕ್ಟೋಬರ್ ೨ರಂದು ಸಂಜೆ ೪ ಗಂಟೆಗೆ ದಸರಾ ಉತ್ಸವಕ್ಕೆ ಅಧಿಕೃತ ಚಾಲನೆ ದೊರಕಲಿದ್ದು, ಪಟ್ಟಣದ ಶ್ರೀ ದೊಡ್ಡಮ್ಮ ದೇವಸ್ಥಾನ ಆವರಣದಲ್ಲಿ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ದಸರಾ ಕಾರ್ಯಕ್ರಮ ಪ್ರಾರಂಭವಾಗಿ, ಬಳಿಕ ಬನ್ನಿಮಂಟಪದವರೆಗೆ ಅದ್ಧೂರಿ ಮೆರವಣಿಗೆ ಜರುಗಲಿದೆ. ವಿವಿಧ ಸಾಂಸ್ಕೃತಿಕ ಕಲೆ, ಹಬ್ಬದ ವೈಭವ ಹಾಗೂ ಜನಪದ ಕಣಜದೊಂದಿಗೆ ಮೆರವಣಿಗೆಗೆ ಭಾರೀ ಸನ್ನಾಹಗಳು ನಡೆಯಲಿದೆ ಎಂದು ಹೇಳಿದರು. ಮೈಸೂರಿನ ದಸರಾ ಉದ್ಘಾಟನೆಗೆ ದೀಪಾಭಾಸ್ತಿ ಅವರನ್ನು ಆಹ್ವಾನಿಸದ ಹಿನ್ನೆಲೆ ಈ ಬಾರಿ ಅರಕಲಗೂಡು ದಸರಾ ಉದ್ಘಾಟಕರಾಗಿ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ದೀಪಾಭಾಸ್ತಿ ಅವರು ಸಾಹಿತಿ ಬಾನು ಮುಷ್ತಾಕ್ ಅವರ ಕನ್ನಡ ಕೃತಿಯನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡುವ ಮೂಲಕ ನಮ್ಮ ಜಿಲ್ಲೆಯ ಸಾಹಿತಿಗೆ ಅಂತಾರಾಷ್ಟ್ರೀಯ ಮಟ್ಟದ ಗೌರವ ತಂದುಕೊಟ್ಟಿದ್ದಾರೆ. ಆದ್ದರಿಂದಲೇ ಅವರಿಗೆ ದಸರಾ ಉದ್ಘಾಟನೆಗೆ ಆಹ್ವಾನ ನೀಡುವುದು ನ್ಯಾಯಸಮ್ಮತವೆಂದು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಕವಿ ನಿಸ್ಸಾರ್ ಅಹಮ್ಮದ್ ಮೈಸೂರು ದಸರಾ ಉದ್ಘಾಟನೆ ಮಾಡಿದಾಗ ಯಾವುದೇ ವಿವಾದ ಉಂಟಾಗಲಿಲ್ಲ. ಆದರೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದಾಗ ಅತಿರೇಕದ ವಿವಾದ ಏಕೆ ಎಂಬ ಪ್ರಶ್ನೆಯನ್ನು ಎತ್ತಿದ ಮಂಜು, ನಮಗೆ ಬಾನು ಮುಷ್ತಾಕ್ ವಿರುದ್ಧ ಯಾವುದೇ ಅಭಿಪ್ರಾಯ ಭೇದವಿಲ್ಲ. ಅವರು ಒಪ್ಪಿಗೆ ನೀಡಿದರೆ, ಅರಕಲಗೂಡು ದಸರಾ ಉದ್ಘಾಟನೆಗೆ ಅವರನ್ನು ಆಹ್ವಾನಿಸಲು ನಾವು ಸದಾ ಸಿದ್ದ ಎಂದರು.

ಅರಕಲಗೂಡು ದಸರಾ ಸಮಿತಿಯು ಸ್ಥಳೀಯ ಕಲಾವಿದರು, ಸಾಂಸ್ಕೃತಿಕ ತಂಡಗಳು ಹಾಗೂ ಹಬ್ಬದ ಸಡಗರವನ್ನು ಹೆಚ್ಚಿಸಲು ಅಗತ್ಯ ತಯಾರಿಗಳನ್ನು ನಡೆಸಲಾಗುತ್ತಿದೆ. ಹೋಬಳಿ ಹಾಗೂ ಗ್ರಾಮೀಣ ಪ್ರದೇಶಗಳಿಂದಲೂ ಭಕ್ತರು ಹಾಗೂ ಜನಸಾಮಾನ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದಸರಾ ಮೆರವಣಿಗೆಯಲ್ಲಿ ಬಣ್ಣ ಬಣ್ಣದ ಆಕರ್ಷಕ ಹೂವಿನ ಚಿತ್ತಾರ, ಜನಪದ ಕಲಾರೂಪಗಳು ಹಾಗೂ ಸ್ಥಳೀಯ ಸಾಂಸ್ಕೃತಿಕ ವೈಭವ ಕಾಣಿಸಿಕೊಳ್ಳಲಿದೆ. ಅಂತೆಯೇ, ಮೈಸೂರು ದಸರಾಕ್ಕೆ ಸಮಾನವಾಗಿ ಅರಕಲಗೂಡು ದಸರಾ ಕೂಡ ಸಾಂಸ್ಕೃತಿಕ ವೈಭವ, ಧಾರ್ಮಿಕ ನಂಬಿಕೆ ಹಾಗೂ ಸಾಹಿತ್ಯದ ಗೌರವವನ್ನು ಒಟ್ಟುಗೂಡಿಸುವ ವಿಶೇಷ ವೇದಿಕೆ ಆಗಲಿದೆ ಎಂಬ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಜಾತಿ ಗಣತಿಯ ಕುರಿತು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ರಾಜ್ಯ ಸರ್ಕಾರಕ್ಕೆ ಸ್ವತಃ ಜಾತಿ ಗಣತಿ ನಡೆಸುವ ಅಧಿಕಾರವಿಲ್ಲ. ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ ನಡೆಯುತ್ತಿದೆ. ಆದರೆ ಅದನ್ನು ಜನರಿಗೆ ಜಾತಿ ಸಮೀಕ್ಷೆ ಎಂದು ತಪ್ಪಾಗಿ ತೋರಿಸಲಾಗುತ್ತಿದೆ ಎಂದು ಟೀಕಿಸಿದರು.

ರಸ್ತೆ ಸ್ಥಿತಿಗತಿ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಇಂದಿನ ಸರ್ಕಾರದ ಬಳಿ ರಸ್ತೆ ಗುಂಡಿ ಮುಚ್ಚಲು ಸಹ ಸಮರ್ಪಕ ಅನುದಾನವಿಲ್ಲ. ಜಿಲ್ಲೆಯಷ್ಟೇ ಅಲ್ಲ, ರಾಜ್ಯದಾದ್ಯಂತ ರಸ್ತೆಗಳು ಗುಂಡಿಬಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಜನತೆಗೆ ಅತಿ ಅವಶ್ಯಕವಾಗಿರುವ ರಸ್ತೆ, ಆಸ್ಪತ್ರೆ ಹಾಗೂ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.