ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪುಸ್ತಕಗಳು ಹಾಗೂ ಪತ್ರಿಕೆಗಳು ಜ್ಞಾನಾರ್ಜನೆಗೆ ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಇವುಗಳನ್ನು ಮಿತ್ರರನ್ನಾಗಿ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ಪಟ್ಟಣದ ಹೋಟೆಲ್ ರಾಮದಾಸ್ ಆವರಣದ ಸುಲೋಚನಮ್ಮ ಸಭಾಂಗಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿಂದು ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ಮೌಲ್ಯಯುತ ಶಿಕ್ಷಣಕ್ಕಿಂತ ಅಂಕ ಗಳಿಕೆ ಶಿಕ್ಷಣಕ್ಕೆ ಆದ್ಯತೆ ದೊರಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂಕ ಗಳಿಕೆಯೇ ಕಲಿಕೆಯ ಮೂಲ ಆಶಯವಾಗಿರುವುದರಿಂದ ವಿದ್ಯಾರ್ಥಿಗಳ ಮೇಲೆ ತೀವ್ರ ಕಲಿಕಾ ಒತ್ತಡವಿದೆ. ಪೋಷಕರು ಶಾಲಾ ಕಾಲೇಜುಗಳು ಮಕ್ಕಳ ಮೇಲೆ ಕಲಿಕಾ ಒತ್ತಡ ಹೇರುವ ಬದಲು ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದರು.

ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಎದುರಾಗುವ ಪೈಪೋಟಿಯನ್ನು ಆತ್ಮವಿಶ್ವಾಸದಿಂದ ಎದುರಿಸಿ ಮೊಬೈಲ್ ಸಂಸ್ಕೃತಿಯಿಂದ ಹೊರಬಂದು ಪುಸ್ತಕ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಪುಸ್ತಕ, ದಿನ ಪತ್ರಿಕೆಗಳ ಓದು ನಿಮ್ಮ ಜ್ಞಾನ ಭಂಡಾರವನ್ನು ವಿಸ್ತರಿಸುತ್ತವೆ. ಆದರೆ, ಇಂದು ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗಿದೆ. ಪೋಷಕರು ಮಕ್ಕಳಲ್ಲಿ ಎಳೆಯ ವಯಸ್ಸಿನಿಂದಲೇ ಪುಸ್ತಕ, ಪತ್ರಿಕೆಗಳ ಓದುವುದನ್ನು ರೂಢಿಸಬೇಕು ಎಂದು ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಯುವ ಜನರು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಗುರಿ ಸಾಧನೆ ಮಾಡಬೇಕು ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಸುಬ್ರಹ್ಮಣ್ಯ, ಹಾಸನದ ಎವಿಕೆ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಚ.ಯತೀಶ್ವರ್ ಶರಣ ಸಾಹಿತ್ಯ ಹಾಗೂ ವಚನಗಳ ಸಂದೇಶ ಕುರಿತು ಉಪನ್ಯಾಸ ನೀಡಿದರು. ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಚೆನ್ನವೀರಯ್ಯ ಸ್ವಾಮೀಜಿ, ಮಲೆ ಮಹದೇಶ್ವರ ಸುಕ್ಷೇತ್ರ ಪುರದ ಶ್ರೀಬಸಪ್ಪ ಗುರುಗಳು ಹಾಗೂ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಸುಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ರುದ್ರಮುನಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಇದೇ ವೇಳೆ ಸಾಧಕರಾದ ಆಗ್ರೋ ಮಂಜು, ವೈದ್ಯಾಧಿಕಾರಿ ಡಾ.ಆನಂದ್, ಪ್ರಗತಿಪರ ಕೃಷಿಕರಾದ ಕೆ.ಪಿ.ಲಿಂಗಪ್ಪ, ಉದ್ಯಮಿ ಕೆ.ಎಸ್.ರಾಜೇಶ್, ಮಾತೃಭೂಮಿ ಉಚಿತ ವೃದ್ಧಾಶ್ರಮದ ವ್ಯವಸ್ಥಾಪಕ ನಿರ್ದೇಶಕಿ ವಿಜಯ, ಜೈಹಿಂದ್ ನಾಗಣ್ಣ ಅವರಿಗೆ ಶರಣರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಎಸಿ ಕೆ.ಆರ್.ಶ್ರೀನಿವಾಸ್, ರಾಜ್ಯ ಆರ್ ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಮೈಸೂರು ಪ್ರೇಮ ಇಂಡಸ್ಟ್ರೀಸ್ ನ ವ್ಯವಸ್ಥಾಪಕ ಬೂಕಹಳ್ಳಿ ಮಂಜು, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸುಜೇಂದ್ರ ಕುಮಾರ್, ಪಾಂಡವಪುರ ತಾಲೂಕಿನ ಎಂ.ಬೆಟ್ಟಹಳ್ಳಿಯ ಎಂ.ಎಸ್.ಮಂಜುನಾಥ್ ಇದ್ದರು.