ಸಾರಾಂಶ
ಜನತೆಯ ಜ್ಞಾನವನ್ನು ವಿಸ್ತರಿಸುವಲ್ಲಿ ಪುಸ್ತಕಗಳ ಪಾತ್ರ ಬಹು ಮುಖ್ಯವಾಗಿದೆ. ನಿರಂತರ ಪುಸ್ತಕಗಳನ್ನು ಓದುವುದರಿಂದ ಮನಶಾಂತಿ ಹಾಗೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ: ಜನತೆಯ ಜ್ಞಾನವನ್ನು ವಿಸ್ತರಿಸುವಲ್ಲಿ ಪುಸ್ತಕಗಳ ಪಾತ್ರ ಬಹು ಮುಖ್ಯವಾಗಿದೆ. ನಿರಂತರ ಪುಸ್ತಕಗಳನ್ನು ಓದುವುದರಿಂದ ಮನಶಾಂತಿ ಹಾಗೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಕೆ.ಎಚ್. ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹುಲಕೋಟಿಯಲ್ಲಿ ಕರ್ನಾಟಕ ನಾಮಕರಣ ಸಂಭ್ರಮದಲ್ಲಿ ಪಾಲ್ಗೊಂಡು ಕಾಲೇಜಿನ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರಶಾಂತ ಹುಲಕುಂದ ರಚಿಸಿದ ಸಮಾಜಶಾಸ್ತ್ರ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು. ಕರ್ನಾಟಕ ನಾಮಕರಣ ಸಂಭ್ರಮವು ಕನ್ನಡಿಗರ ಅಸ್ಮಿತೆಯ ಸಂಕೇತವಾಗಿದೆ. ಕರ್ನಾಟಕ ನಾಮಕರಣವಾಗಲು ಗದುಗಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯವೇ ಪ್ರೇರಣೆಯಾಗಿದೆ. ಇದು ಐತಿಹಾಸಿಕ ಸಂಗತಿಯಾಗಿದ್ದು, ಇಂತಹ ಬಹುಮುಖ್ಯ ಸಂಗತಿಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅನಿರೀಕ್ಷಿತವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಶಾಂತ ಹುಲಕುಂದ ರಚಿಸಿರುವ ಸಮಾಜಶಾಸ್ತ್ರೀಯ ಸಂಶೋಧನೆಗಾಗಿ ಸಂಖ್ಯಾಶಾಸ್ತ್ರ, ಸಮಾಜ ಮತ್ತು ಬುಡಕಟ್ಟುಗಳು, ಸಾಮಾಜಿಕ ಉದ್ಯಮಶೀಲತೆ, ಆಹಾರ ಸಂಸ್ಕೃತಿಯ ಸಮಾಜಶಾಸ್ತ್ರ ಕೃತಿಗಳು ವಿದ್ಯಾರ್ಥಿಗಳ ಬಹುಶಿಸ್ತೀಯ ಅಧ್ಯಯನಕ್ಕೆ ಪೂರಕವಾಗಿವೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಶಿವಪ್ಪ ಮ. ಕುರಿ ನುಡಿದರು.
ಸಭೆಯಲ್ಲಿ ಕನ್ನಡ ಪ್ರಾಧ್ಯಾಪಕಿ ಡಾ. ಸುಧಾ ಕೌಜಗೇರಿ, ಕೆ.ಎಚ್. ಬೇಲೂರ, ಡಾ. ಜಿ. ಬಿ. ಪಾಟೀಲ, ಡಾ. ರಾಜೇಂದ್ರ ಗಡಾದ, ಡಾ. ಅಪ್ಪಣ್ಣ ಹಂಜೆ, ಡಾ. ಲಕ್ಷ್ಮಣ ಮುಳಗುಂದ, ರಮೇಶ ಹುಲಕುಂದ, ಡಾ. ಜಿತೇಂದ್ರ ಜಹಾಗೀರದಾರ, ಮಹಾಂತೇಶ ಗೊರವನಕೊಳ್ಳ ಸೇರಿದಂತೆ ಅಧ್ಯಾಪಕ ವೃಂದದವರು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಿರಣಕುಮಾರ ರಾಯರ ನಿರೂಪಿಸಿದರು. ಚಂದ್ರಪ್ಪ ಎಚ್. ಸ್ವಾಗಿತಿಸಿದರು. ನವೀನ ತೀರ್ಲಾಪೂರ ವಂದಿಸಿದರು.