ಕನ್ನಡಪ್ರಭ ವಾರ್ತೆ ಹಾಸನ
ಪುಸ್ತಕಗಳು ಆತ್ಮದ ದನಿಗಳಾಗಿದ್ದು, ಸಹೃದಯ ಓದುಗರಲ್ಲಿ ಆನಂದದ ಅನುಭೂತಿಯನ್ನು ಸೃಷ್ಟಿಸುವ ಶಕ್ತಿ ಹೊಂದಿವೆ. ಈ ಕಾರಣಕ್ಕಾಗಿಯೇ ಸಮಾಜದಲ್ಲಿ ಪುಸ್ತಕಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ಲೇಖಕ ಹಾಗೂ ನಿವೃತ್ತ ಉಪನ್ಯಾಸಕ ಗೋರೂರು ಶಿವೇಶ್ ತಿಳಿಸಿದರು.ವಿಶ್ವ ಪುಸ್ತಕ ದಿನದ ಅಂಗವಾಗಿ ನಗರದ ಹೇಮಾವತಿ ಆಸ್ಪತ್ರೆ ಎದುರಿನ ಅದಮ್ಯ ಪುಸ್ತಕ ಭಂಡಾರದಲ್ಲಿ ಅದಮ್ಯ ಬುಕ್ಸ್, ಕದಂಬ ಸೈನ್ಯ, ಕನ್ನಡ ಸಂಘಟನೆ ಹಾಗೂ ಸಾಹಿತ್ಯಾಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಸಾಹಿತ್ಯ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ವಿಶ್ವ ಪುಸ್ತಕ ದಿನವು ಕೇವಲ ಆಚರಣೆಯಲ್ಲ, ಅದು ಭಾಷೆಯ ಹಬ್ಬ. ವಿಶ್ವಪ್ರಸಿದ್ಧ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಅವರ ಜನನ ಮತ್ತು ಮರಣದ ದಿನವೇ ಈ ದಿನವಾಗಿರುವುದು ವಿಶೇಷ. ಹಿಂದೆ ಜಗತ್ತನ್ನಾಳುತ್ತಿದ್ದ ಗ್ರೀಕ್, ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳನ್ನು ಮೀರಿಸಿ, ಇಂಗ್ಲಿಷ್ ಭಾಷೆಯನ್ನು ಪ್ರಪಂಚದ ಭಾಷೆಯನ್ನಾಗಿಸಲು ಶೇಕ್ಸ್‌ಪಿಯರ್ ನೀಡಿದ ಕೊಡುಗೆ ಅನನ್ಯ ಎಂದು ಶಿವೇಶ್ ವಿವರಿಸಿದರು.ಶೇಕ್ಸ್‌ಪಿಯರ್ ಹೇಳುವಂತೆ ಈ ಇಡೀ ಜಗತ್ತು ಒಂದು ರಂಗಭೂಮಿಯಾದರೆ, ಪುಸ್ತಕಗಳು ಆ ರಂಗಭೂಮಿಯಲ್ಲಿ ನಾವು ಹೇಗೆ ಬದುಕಬೇಕು ಎಂದು ಕಲಿಸುವ ಪಠ್ಯಗಳಿದ್ದಂತೆ. ಒಬ್ಬ ವ್ಯಕ್ತಿಯ ಆಲೋಚನೆಗಳು ಪುಸ್ತಕವಾಗಿ ಮಾರ್ಪಟ್ಟಾಗ ಅದು ಕಾಲದ ಮಿತಿಗಳನ್ನು ಮೀರಿ ಬೆಳೆಯಬಲ್ಲದು ಎಂಬುದಕ್ಕೆ ಅವರ ಸಾಹಿತ್ಯವೇ ಸಾಕ್ಷಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಂಬ ಸೈನ್ಯದ ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಎ.ಎಚ್. ಗಣೇಶ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಲು ಪಠ್ಯ ಓದಿದರೆ ಸಾಲದು, ಅದರ ಜೊತೆಗೆ ಸಾಹಿತ್ಯದ ಓದು ಸಹಕಾರಿಯಾಗುತ್ತದೆ. ನನ್ನ ಸುದೀರ್ಘ ಉಪನ್ಯಾಸ ವೃತ್ತಿಯಲ್ಲಿ ಪರಿಣಾಮಕಾರಿ ಬೋಧನೆಗೆ ನನ್ನ ಓದಿನ ಹವ್ಯಾಸವೇ ಅಡಿಪಾಯವಾಗಿತ್ತು ಎಂದು ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮ ಉದ್ಘಾಟಿಸಿದ ಸಂಪಾದಕ ರವಿ ನಾಕಲಗೂಡು ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಪುಸ್ತಕಗಳ ಮಹತ್ವ ಸಾರುವ ಇಂತಹ ಕಾರ್ಯಕ್ರಮಗಳು ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು. ಮತ್ತೋರ್ವ ಸಂಪಾದಕ ಆನಂದ ಪಟೇಲ್ ನೆಲ್ಲಿಗೆರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಜ್ಞಾನಾರ್ಜನೆಯ ಸೂಕ್ತಿಗಳ ಮೂಲಕ ಓದಿನ ಶಕ್ತಿಯನ್ನು ವಿವರಿಸಿದರು. ಲೇಖಕ ಗೋರೂರು ಅನಂತರಾಜು ಸಾಹಿತ್ಯವು ಸಮಾಜದ ಪ್ರತಿಬಿಂಬ ಎಂದು ನುಡಿದರು.
ನಿವೃತ್ತ ಉಪನ್ಯಾಸಕ ಡಾ. ಬರಾಳು ಶಿವರಾಮ, ಲೇಖಕ ಕೊಟ್ರೇಶ್ ಎಸ್. ಉಪ್ಪಾರ್ ಹಾಗೂ ಲೇಖಕ ವಿಶ್ವಾಸ್ ಡಿ. ಗೌಡ ಅವರು ವಿಶ್ವ ಪುಸ್ತಕ ದಿನದ ಕುರಿತು ಮಾತನಾಡಿದರು.ಇದೇ ಸಂದರ್ಭದಲ್ಲಿ ಕನ್ನಡ ಗೋಡೆ ಬರಹಗಾರ ಗೋರೂರು ಯಾಕೂಬ್ ಅವರನ್ನು ಪುಸ್ತಕ ನೀಡಿ ಗೌರವಿಸಲಾಯಿತು. ಅವರ ಕನ್ನಡ ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸವನ್ನು ಕಾರ್ಯಕ್ರಮದಲ್ಲಿ ಶ್ಲಾಘಿಸಲಾಯಿತು.
ಗಾಯಕ ಶ್ರೀಕಾಂತ್ ಗೋರೂರು ಪ್ರಾರ್ಥಿಸಿದರು. ಲೇಖಕ ಗೋರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು ಮತ್ತು ಅದಮ್ಯ ಬುಕ್ಸ್‌ನ ನಾಗೇಂದ್ರ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಹಿತ್ಯಾಭಿಮಾನಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.