ಸಾರಾಂಶ
ಯಲಬುರ್ಗಾ: ಪುಸ್ತಕಗಳು ಹಳೆಯದಾದರೂ ಅವುಗಳಲ್ಲಿನ ವಿಷಯವಸ್ತು ಮಾತ್ರ ಶಾಶ್ವತವಾಗಿರುತ್ತದೆ ಎಂದು ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶರಣು ಕಳಸಪ್ಪನವರ್ ಹೇಳಿದರು.ತಾಲೂಕಿನ ಬಂಡಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಿಂದ ಗುರುವಾರ ಹಮ್ಮಿಕೊಂಡಿದ್ದ ಪುಸ್ತಕ ಜೋಳಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರು ತಮ್ಮ ಮನೆಯಲ್ಲಿರುವ ಪುಸ್ತಕಗಳನ್ನು ದಾನ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.ಮಕ್ಕಳ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಉಪಯುಕ್ತ ಪುಸ್ತಗಳನ್ನು ಜೋಳಿಗೆಗೆ ಹಾಕುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ಸಾರ್ವಜನಿಕರಿಂದ ಸಂಗ್ರಹಿಸುವ ಪುಸ್ತಕಗಳ ಉಪಯೋಗವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಜ್ಞಾನಾರ್ಜನೆ ಬೆಳೆಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಬೇಕು ಎಂದು ಹೇಳಿದರು.ಶಿಕ್ಷಕ ಬಸವರಾಜ ಮುಗಳಿ ಮಾತನಾಡಿ, ಶಾಲೆಯಲ್ಲಿ ಗ್ರಂಥಾಲಯವನ್ನು ಅಭಿವೃದ್ಧಿ ಮಾಡುವ ಸಲುವಾಗಿ ಶಾಲಾ ಮಕ್ಕಳೊಂದಿಗೆ ಪುಸ್ತಕ ಜೋಳಿಗೆ ಕಾರ್ಯಕ್ರಮ ನಡೆಸಲಾಗಿದೆ ಎಂದರು.ಪ್ರಮುಖರಾದ ವಿರೂಪಾಕ್ಷಪ್ಪ ಶ್ರೀಗಿರಿ, ಮಂಜುನಾಥ ಬೂಸನ್ನವರ, ಕೆರೆಬಸವರಾಜ ಬಂಡ್ರಿ, ಶಿಕ್ಷಕರಾದ ಶರಣಪ್ಪ ದೊಡ್ಡಮನಿ, ಭೀಮಾಂಬಿಕಾ ಮೂಗನೂರು, ಸರಸ್ವತಿ ತೆಗ್ಗಿನಮನಿ ಇದ್ದರು.