ಬದುಕೇ ವಿಸ್ಮಯ ಕೃತಿಗೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು, ಅವರ ಬದುಕು, ಅನುಭವಗಳು ಹಾಗೂ ತಮ್ಮ ಸುತ್ತಲಿನ ಸಮಾಜದ ಆಗುಹೋಗುಗಳೇ ಪ್ರಮುಖ ಪ್ರೇರಣೆ.
ಕುಮಟಾ: ಪ್ರತಿಯೊಂದು ಮನೆಯಲ್ಲಿಯೂ ಪುಸ್ತಕಗಳಿಗೆ, ಓದಿಗೆ, ಕಲೆಗೆ ಮತ್ತು ಜ್ಞಾನಾರ್ಜನೆಗೆ ಆದ್ಯತೆ ಸಿಗಬೇಕು. ಮನೆಯ ವಾಸ್ತು, ದಿಕ್ಕಿನ ಬಗ್ಗೆ, ಮನೆಯ ಕುಬೇರ ಮೂಲೆ ಬಗ್ಗೆ ಹೆಚ್ಚಾಗಿ ಚಿಂತಿಸಿದಂತೆಯೇ ಸರಸ್ವತಿಯ ಮೂಲೆಯ ಬಗ್ಗೆ ವಿಶೇಷ ಆದ್ಯತೆ ಕೊಡಬೇಕು. ಜ್ಞಾನದ ನೆಲೆಯಾದ ಪುಸ್ತಕ ಮತ್ತು ಗ್ರಂಥಾಲಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಖ್ಯಾತ ಲೇಖಕ ರಾಜು ಅಡಕಳ್ಳಿ ಹೇಳಿದರು.
ಕೊಂಕಣ ಎಜುಕೇಶನ್ ಟ್ರಸ್ಟ್, ವಿಧಾತ್ರಿ ಅಕಾಡೆಮಿ, ರಂಗ ಸಾರಸ್ವತದ ಆಶ್ರಯದಲ್ಲಿ ಬಿ.ಕೆ. ಭಂಡಾರ್ಕರ್ಸ್ ಸರಸ್ವತಿ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜು ಅಡಕಳ್ಳಿ ವಿರಚಿತ ಬದುಕೇ ವಿಸ್ಮಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಬದುಕೇ ವಿಸ್ಮಯ ಕೃತಿಗೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು, ಅವರ ಬದುಕು, ಅನುಭವಗಳು ಹಾಗೂ ತಮ್ಮ ಸುತ್ತಲಿನ ಸಮಾಜದ ಆಗುಹೋಗುಗಳೇ ಪ್ರಮುಖ ಪ್ರೇರಣೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಹಾಗೂ ಲೇಖಕ ಡಾ. ನಿರಂಜನ ವಾನಳ್ಳಿಯವರು ಯಾಜಿ ಪುಸ್ತಕ ಪ್ರಕಾಶದಿಂದ ಪ್ರಕಟಗೊಂಡ ಲೇಖಕ ರಾಜು ಅಡಕಳ್ಳಿ ಅವರ ಬದುಕೇ ವಿಸ್ಮಯ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ರಾಜು ಅಡಕಳ್ಳಿ ಅವರ ಬರವಣಿಗೆಯಲ್ಲಿನ ಭಾಷಾ ಪ್ರೌಢಿಮೆ, ವಿಶಿಷ್ಟ ಅಭಿವ್ಯಕ್ತಿ, ಹಾಸ್ಯಪ್ರಜ್ಞೆ ಹಾಗೂ ಪ್ರಾಸಪ್ರಯೋಗದ ವೈಶಿಷ್ಟ್ಯವನ್ನು ಮೆಚ್ಚುವಂಥದ್ದು ಎಂದರು.ಮುಖ್ಯ ಅತಿಥಿ, ವಿಜ್ಞಾನಿ, ಸಮಾಜ ಸೇವಕ ಡಾ. ಸುರೇಂದ್ರ ಕುಲಕರ್ಣಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಹೆಚ್ಚಿಸುವ ಅಗತ್ಯವಿದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ನಡುವೆ ಓದುವ ಸಂಸ್ಕೃತಿ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ ಮಾತನಾಡಿ, ತಮ್ಮ ಸುತ್ತಮುತ್ತಲಿನ ಬದುಕು, ಜನರು ಮತ್ತು ಅನುಭವಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಬರವಣಿಗೆಯ ಮೂಲಕ ಅಭಿವ್ಯಕ್ತಿಸುವ ರಾಜು ಅಡಕಳ್ಳಿ ಪ್ರಯತ್ನ ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಕೊಂಕಣ ಎಜುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಮುರಳೀಧರ ಪ್ರಭು ಮಾತನಾಡಿ, ಸಾಹಿತ್ಯ ಮತ್ತು ಪುಸ್ತಕಗಳು ಸಮಾಜದ ಸಾಂಸ್ಕೃತಿಕ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಗಳು ಹೊಸ ಬರಹಗಾರರಿಗೆ ಸ್ಫೂರ್ತಿ ನೀಡುವುದರ ಜತೆಗೆ ಓದುಗರಲ್ಲಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸುತ್ತವೆ ಎಂದರು.
ಪ್ರಾಚಾರ್ಯ ಜಿ.ಎಸ್. ಕಣ್ಣಿ ಸ್ವಾಗತಿಸಿದರು. ರಂಗಸಾರಸ್ವತದ ಅಧ್ಯಕ್ಷ ಚಿದಾನಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಮನುವಿಕಾಸ ಸಂಸ್ಥೆಯ ಗಣಪತಿ ಭಟ್, ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ಅಸ್ಮಿತೆ ಫೌಂಡೇಶನ್ನ ಡಾ. ರಿಯಾಜ್ ಸಾಗರ್, ಭತ್ತದ ಕೃಷಿತಜ್ಞ ನಾಗರಾಜ ನಾಯ್ಕ ಇತರರು ಪಾಲ್ಗೊಂಡಿದ್ದರು.