ಕನ್ನಡಪ್ರಭ ವಾರ್ತೆ ರಾಮನಗರ
ಪುಸ್ತಕಗಳು ಮನುಷ್ಯನಿಗೆ ಜ್ಞಾನ ನೀಡುವುದು ಮಾತ್ರವಲ್ಲದೆ ಸಮಾಜವನ್ನು ಎಚ್ಚರಿಸುವ ಹಾಗೂ ಇತಿಹಾಸವನ್ನು ನೆನಪಿಸುವ ಕೆಲಸ ಮಾಡುತ್ತವೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.ನಗರದ ದ್ಯಾವರಸೇಗೌಡನದೊಡ್ಡಿಯ ತಮ್ಮ ನಿವಾಸದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಿಲ್ಲಾ ಜಾಗೃತಿ ಸಮಿತಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಪಂಚದಲ್ಲಿ ಪುಸ್ತಕಗಳು ಚಳವಳಿ, ಹೋರಾಟಗಳಿಗೆ ಧ್ವನಿಯನ್ನು ಕೊಟ್ಟಿರುವುದನ್ನು ಕಂಡಿದ್ದೇವೆ. ಪುಸ್ತಕಗಳಲ್ಲಿ ದಾಖಲಿಸಿರುವ ಹಲವು ವಿಷಯಗಳಿಂದ ನಮ್ಮ ನಾಡಿನ ಬಹುಮುಖ ಸಂಸ್ಕೃತಿ ಆಚಾರ-ವಿಚಾರ- ಚಳವಳಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿವೆ. ಹಾಗಾಗಿ ಮನೆಗೊಂದು ಗ್ರಂಥಾಲಯ ಬಹಳ ಉಪಯುಕ್ತ ಕಾರ್ಯಕ್ರಮ. ಇದನ್ನು ನಾವೆಲ್ಲರೂ ಬೆಳೆಸಬೇಕಿದೆ ಎಂದು ಮನವಿ ಮಾಡಿದರು.
ಈಗಿನ ಧಾವಂತದ ಬದುಕಿನಲ್ಲಿ ಪುಸ್ತಕ ಓದಲು ಸಮಯ ಇಲ್ಲದಂತಾಗಿದೆ. ಇನ್ನು ಯುವಕ- ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹಂಚಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಇದು ಸಲ್ಲದು, ಪುಸ್ತಕವನ್ನು ಓದುವುದು ಹವ್ಯಾಸವಾಗಬೇಕು. ಆಗ ಮಾತ್ರ ಜ್ಞಾನ , ಘನತೆ, ಗೌರವ ಹೆಚ್ಚುತ್ತದೆ. ಆದ್ದರಿಂದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ನಮ್ಮ ನಿವಾಸ ಆಯ್ಕೆ ಮಾಡಿಕೊಂಡಿರುವುದಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕೆ.ಶೇಷಾದ್ರಿ ಹೇಳಿದರು.‘ಮನೆಗೊಂದು ಗ್ರಂಥಾಲಯ’ ಉದ್ಘಾಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ, ಜ್ಞಾನ ಎಂಬುದು ಬೆಳಕಾಗಿದ್ದು, ಜ್ಞಾನದ ಬುನಾದಿಯ ಮೇಲೆ ಭಕ್ತಿಯ ಮನೆ ಕಟ್ಟಬೇಕು. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಜ್ಞಾನ, ಭಕ್ತಿ ರಥದ ಎರಡು ಚಕ್ರಗಳಿದ್ದಂತೆ. ಹಾಗಾಗಿ ಪ್ರತಿ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಸ್ಥಾಪಿಸುವ ಬೀಜವನ್ನು ಬಿತ್ತುವ ಕೆಲಸವನ್ನು ಮಾಡಲಾಗುತ್ತಿದೆ. ಮನುಷ್ಯರಿಗೆ ಅರಿವಿನ ಕೊರತೆಯಿಂದ ಬೇಕಿಲ್ಲದಿರುವ ವಿಷಯಗಳು ಮೊದಲ ಆದ್ಯತೆ ಯಾಗುತ್ತಿದ್ದು, ಅತ್ಯಗತ್ಯವಾಗಿ ಬೇಕಿರುವ ಜ್ಞಾನ ನಂತರದ ಆಯ್ಕೆಯಾಗಿರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದರು.
ಈ ಹಿಂದಿನ ಅಧ್ಯಕ್ಷರು ರೂಪಿಸಿದ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ನನ್ನ ಅವಧಿಯಲ್ಲಿ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಡಿ ಯುವಕರಿಗೆ ಸಾಹಿತ್ಯ ಪ್ರೀತಿಯನ್ನು ಬಿತ್ತುವ ದೃಷ್ಟಿಯಿಂದ ಉಪನ್ಯಾಸ, ತಲೆದಂಡ ನಾಟಕ, ಜಿ.ಎಸ್.ಶಿವರುದ್ರಪ್ಪ ಅವರ ಶತಮಾನೋತ್ಸವ ಕಾವ್ಯಾರ್ಥ ಚಿಂತನ ಕಾರ್ಯಕ್ರಮಗಳ ಜೊತೆಗೆ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದರು.
ನಮ್ಮ ಹಿರಿಯರು ಮನೆಗಳಲ್ಲಿ ಒಂದು ಪೂಜಾ ಮನೆ ಸ್ಥಾಪಿಸಿದ್ದಾರೆ. ಅದಕ್ಕೆ ಅಗರಬತ್ತಿ ಕೊಳ್ಳುವ ಸಂಪ್ರದಾಯವಿದೆ. ಅದರ ಪಕ್ಕ ಪುಸ್ತಕ ಮಾರಾಟ ಮಳಿಗೆ ಇದ್ದರೂ ಆ ಕಡೆ ಮುಖ ಮಾಡುವುದಿಲ್ಲ. ಮನೆಯಲ್ಲಿ ಪುಸ್ತಕದ ರ್‍ಯಾಕ್ ನಿರ್ಮಿಸಿದರೆ ಪುಸ್ತಕ ಖರೀದಿಗೆ ಮುಂದಾಗುವ ಸಾಧ್ಯತೆಯಿದೆ. ಆ ದೃಷ್ಟಿಯಿಂದ ಚಿಂತನೆ ನಡೆಸಿ ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕುಮಾರವ್ಯಾಸ, ಗದುಗಿನ ಭಾರತದಂತಹ ಪುಸ್ತಕಗಳಲ್ಲಿನ ಅರ್ಥಪೂರ್ಣ ಕನ್ನಡ ಪದಗಳು ಪುಸ್ತಕದ ಹಿರಿಮೆಯನ್ನು ಹೆಚ್ಚಿಸಿವೆ. ಪ್ರತಿನಿತ್ಯ ಪುಸ್ತಕಗಳನ್ನು ಓದುವ ರಾಜಕಾರಣಿಗಳು ಮತ್ತು ಜನನಾಯಕರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮತ್ತು ಗಟ್ಟಿತನವನ್ನು ಕಾಣಬಹುದಾಗಿದೆ. ಓದಿದ ಮನುಷ್ಯ ದಾರಿಯನ್ನು ತಪ್ಪುವುದಿಲ್ಲ. ಬದಲಿಗೆ ಸರಿ ದಾರಿಯಲ್ಲಿ ಸಾಗುತ್ತಾನೆ. ಆ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ರಾಜಕಾರಣಿಗಳ ಮನೆಗಳು, ಹೆಸರಾಂತ ಸಾಹಿತಿಗಳ ಗ್ರಾಮಗಳಲ್ಲಿ ಗ್ರಂಥಾಲಯ ಪ್ರಾರಂಭಿಸಿದರೆ ಜನರಿಗೆ ಉಪಯುಕ್ತವಾಗಲಿದೆ ಎಂದು ತಿಳಿಸಿದರು.ಉಪನ್ಯಾಸಕಿ ಡಾ.ಎಚ್.ಎಲ್.ಪುಷ್ಪಾ ಮಾತನಾಡಿ, ಪುಸ್ತಕಗಳು ಓದುಗರ ಜ್ಞಾನ ಮತ್ತು ಜಗತ್ತನ್ನು ವಿಸ್ತರಿಸುತ್ತವೆ. ನಾವು ಓದುವ ಜೊತೆಗೆ ವಿಶೇಷವಾಗಿ ಯುವಕರಿಗೆ ಪುಸ್ತಕಗಳನ್ನು ಹಂಚಿ ಓದಿಸುವ ಕೆಲಸ ಮಾಡಬೇಕಿದೆ. ಸಮಾಜದೆಲ್ಲೆಡೆ ಪುಸ್ತಕವೇ ದೇವರು ಎಂಬ ಮಾತಾಗಬೇಕು. ಆಗ ಮಾತ್ರ ಈ ಕಾರ್ಯಕ್ರಮ ಸಾರ್ಥಕತೆ ಪಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿಮಾ ಕೆ.ಶೇಷಾದ್ರಿ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಲೇಖಕ ಆಸೀಫ್ ಷರೀಫ್, ಶಿವಕುಮಾರಸ್ವಾಮಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಪ್ರತಿಮಾ ಶೇಷಾದ್ರಿ, ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕಿ ಕವಿತಾರಾವ್, ಆರ್.ನಾಗರಾಜು, ಶ್ರೀನಿವಾಸ್, ಮಾತನಾಡಿದರು. ನಾಗೇಂದ್ರ, ಪದ್ಮರೇಖಾ ಸೇರಿದಂತೆ ಸಾಹಿತಿಗಳು, ನಿವೃತ್ತ ಶಿಕ್ಷಕರು, ವಿಚಾರವಂತರು ಉಪಸ್ಥಿತರಿದ್ದರು.-----
ಗ್ರಾಮಾಂತರ ಪ್ರದೇಶದಲ್ಲಿ 195 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 150ಕ್ಕೂ ಹೆಚ್ಚು ಸ್ವಂತ ಕಟ್ಟಡಗಳನ್ನು ಹೊಂದಿವೆ. ಸಾರ್ವಜನಿಕರಲ್ಲಿ ಜ್ಞಾನವನ್ನು ವೃದ್ಧಿಸಲು ಎಂಪಿಸಿಎಸ್‌ಗಳಲ್ಲಿ ಗ್ರಂಥಾಲಯ ಸ್ಥಾಪಿಸಲಾಗುವುದು.- ಪಿ.ನಾಗರಾಜು, ಬಮೂಲ್ ನಿರ್ದೇಶಕರು.
-ಸಮಾಜ ಎಲ್ಲ ಸ್ಥರಗಳಲ್ಲಿ ಮಕ್ಕಳು ಬೆಳೆದಂತೆ ಓದುವ ಗೀಳನ್ನು ಮರೆತಿದ್ದು, ಜವಾಬ್ದಾರಿಯುತವಾದ ನಾವೆಲ್ಲರೂ ಸಹ ಮಕ್ಕಳಿಗೆ ನೀತಿ ಕಥೆಗಳು ಮತ್ತು ಮೌಲ್ಯಯುತ ಪುಸ್ತಕಗಳನ್ನು ಓದಿಸುವ ಕೆಲಸ ಮಾಡಬೇಕಿದೆ. ಆಗ ಅವರಿಗೆ ನಾವು ಪಾಠ ಹೇಳಬೇಕಿಲ್ಲ, ಅವರ ಬದುಕಿನ ದಾರಿಯೇ ಬದಲಾಗುತ್ತದೆ. ಆ ನಿಟ್ಟಿನಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಎಲ್ಲೆಡೆ ಆಂದೋಲನ ರೀತಿಯಲ್ಲಿ ಆಗಬೇಕಿದೆ.
- ಕೆ.ಸತೀಶ್, ಜಿಲ್ಲಾಧ್ಯಕ್ಷರು, ಸರ್ಕಾರಿ ನೌಕರರ ಸಂಘ,ಬೆಂ.ದಕ್ಷಿಣ.