ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಿಸಿರುವ ‘ಎಸ್.ಎಂ.ಕೃಷ್ಣ ರಸ್ತೆ’ ಸಂಚಾರಕ್ಕೆ ಮುಕ್ತಗೊಳ್ಳಲು ಅಣಿಯಾಗಿದ್ದು, ಬೆನ್ನಲ್ಲೇ ಆ ಭಾಗದಲ್ಲಿ ವಾಣಿಜ್ಯ ಬೆಳವಣಿಗೆ ಗರಿಗೆದರುವ ಸೂಚನೆ ದೊರೆತಿದೆ.

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಿಸಿರುವ ‘ಎಸ್.ಎಂ.ಕೃಷ್ಣ ರಸ್ತೆ’ ಸಂಚಾರಕ್ಕೆ ಮುಕ್ತಗೊಳ್ಳಲು ಅಣಿಯಾಗಿದ್ದು, ಬೆನ್ನಲ್ಲೇ ಆ ಭಾಗದಲ್ಲಿ ವಾಣಿಜ್ಯ ಬೆಳವಣಿಗೆ ಗರಿಗೆದರುವ ಸೂಚನೆ ದೊರೆತಿದೆ.ಸಂಚಾರ ಸುಧಾರಣೆ ಜತೆಗೆ ಕೈಗಾರಿಕೆಗಳು, ವ್ಯಾಪಾರ ಚಟುವಟಿಕೆ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಬೆಳವಣಿಗೆಯತ ಹೊಸ ಅವಕಾಶಗಳನ್ನು ಸೃಷ್ಟಿಸುವ ಅಭಿವೃದ್ಧಿ ಕಾರಿಡಾರ್ ಆಗಿ ಎಸ್‌.ಎಂ.ಕೃಷ್ಣ ರಸ್ತೆ ರೂಪುಗೊಳ್ಳುವ ಸಾಧ್ಯತೆಯಿದೆ.

10.7 ಕಿಲೋಮೀಟರ್ ಉದ್ದದ, 10 ಲೇನ್‌ಗಳ ಈ ರಸ್ತೆ

ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ 10.7 ಕಿಲೋಮೀಟರ್ ಉದ್ದದ, 10 ಲೇನ್‌ಗಳ ಈ ರಸ್ತೆ ಕಾಮಗಾರಿ ಹೊಣೆಯನ್ನು ಸ್ಟಾರ್ ಇನ್ಫೋಟೆಕ್ ಕಂಪನಿ ಹೊತ್ತಿತ್ತು.

330 ಅಡಿ ಅಗಲದ ಸುರಂಗ ಮಾರ್ಗ, ಆಧುನಿಕ ಸರ್ವಿಸ್ ರಸ್ತೆಗಳನ್ನು ನಿರ್ಮಿಸಿರುವ ಈ ಕಂಪನಿಯ ಅತ್ಯುತ್ತಮ ಕಾರ್ಯವೈಖರಿಯು ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರಿನ ನಡುವಿನ ಸಂಚಾರ ಮತ್ತಷ್ಟು ಸುಗಮವಾಗಿಸಲಿದ್ದು, ಕೈಗಾರಿಕಾ ವಲಯಗಳಿಗೆ ವೇಗದ ಸಂಪರ್ಕ ದೊರೆಯಲಿದೆ. ಈ ರಸ್ತೆ ಪೀಣ್ಯ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕೆಂಗೇರಿ, ಬಿಡದಿ, ರಾಮನಗರ ಹಾಗೂ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ತೆರಳುವ ಕಾರ್ಮಿಕ ವರ್ಗ, ಉದ್ಯಮಿಗಳು, ವ್ಯಾಪಾರಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ.

ಸರಕು ಸಾಗಣೆ ವಾಹನಗಳು ಯಾವುದೇ ಟೋಲ್ ಶುಲ್ಕವಿಲ್ಲದೆ, ನೈಸ್ ರಸ್ತೆಗೆ ಪರ್ಯಾಯವಾಗಿ ನಗರದ ಹೃದಯಭಾಗ ಪ್ರವೇಶಿಸದೇ ಪರ್ಯಾಯ ಮಾರ್ಗ ಬಳಸುವ ಅವಕಾಶ ದೊರೆಯುವುದರಿಂದ ಸಮಯ, ಇಂಧನ ಮತ್ತು ಹಣ ಉಳಿತಾಯವಾಗಲಿದೆ. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವ ಜೊತೆಗೆ ಕೈಗಾರಿಕೆಗಳ ಕಾರ್ಯಕ್ಷಮತೆಯೂ ಹೆಚ್ಚಲಿದೆ. ನಗರವಾಸಿಗಳಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿದಂತಾಗಲಿದೆ.

ಉದ್ಯೋಗ ಸೃಷ್ಟಿಗೂ ಅನುಕೂಲ:

ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ಉತ್ತಮ ರಸ್ತೆ ಸಂಪರ್ಕದಿಂದ ಹೊಸ ಹೂಡಿಕೆಗಳು ಆಕರ್ಷಿತವಾಗುವ ಸಾಧ್ಯತೆ ಹೆಚ್ಚಿದ್ದು, ಗುಡಿ ಮತ್ತು ಸಣ್ಣ ಕೈಗಾರಿಕಾ ಚಟುವಟಿಕೆಗಳು ಬೆಳೆಯಲು ಈ ರಸ್ತೆ ಉತ್ತೇಜನ ನೀಡಲಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿ ಆರ್ಥಿಕ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ಎಸ್.ಎಂ.ಕೃಷ್ಣ ರಸ್ತೆ ಮಹತ್ತರ ಪಾತ್ರ ವಹಿಸಲಿದೆ.

ವೇಗದ ಸಂಪರ್ಕ, ಸುಗಮ ಲಾಜಿಸ್ಟಿಕ್ಸ್ ವ್ಯವಸ್ಥೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಹೊಸ ಅವಕಾಶಗಳನ್ನು ಒದಗಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಬಲ ತುಂಬಲಿದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕನಸು ಕಂಡಿದ್ದ ಆಧುನಿಕ ಮತ್ತು ಹೂಡಿಕೆ ಸ್ನೇಹಿ ಬೆಂಗಳೂರಿನ ಪರಿಕಲ್ಪನೆಗೆ ಅನುಗುಣವಾಗಿ ನಿರ್ಮಾಣಗೊಂಡಿರುವ ಈ ರಸ್ತೆ, ನಗರಾಭಿವೃದ್ಧಿಯ ಜೊತೆಗೆ ಕೈಗಾರಿಕಾ ಅಭಿವೃದ್ಧಿಗೂ ಹೊಸ ದಿಕ್ಕು ತೋರಲಿದೆ ಎಂಬ ವಿಶ್ವಾಸವನ್ನು ಬಿಡಿಎ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಬಿಡಿಎ ಪರಿಶ್ರಮಕ್ಕೆ ಸಂದ ಫಲ

ಯೋಜನೆ ಅನುಷ್ಠಾನದ ಆರಂಭಿಕ ಹಂತದಲ್ಲಿ ಭೂಸ್ವಾಧೀನ, ಸ್ಥಳೀಯರ ಆಕ್ಷೇಪಣೆ, ಪರಿಹಾರಕ್ಕೆ ಸಂಬಂಧಿಸಿದ ಬೇಡಿಕೆಗಳು ಹಾಗೂ ಕಾಮಗಾರಿ ಪ್ರದೇಶದ ವಿವಿಧ ತಾಂತ್ರಿಕ ಅಡಚಣೆಗಳು ಪ್ರಮುಖ ಸವಾಲುಗಳಾಗಿದ್ದವು. ಕೆಲವು ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು, ಭೂಮಿ ಮತ್ತು ಆಸ್ತಿಗಳ ಕುರಿತ ಆತಂಕಗಳನ್ನು ನಿವಾಸಿಗಳು ಮುಂದಿಟ್ಟಿದ್ದರು. 

 ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಆಯುಕ್ತರಾದ ಮಣಿವಣ್ಣನ್ ಅವರು ಈ ಎಲ್ಲ ಸವಾಲುಗಳನ್ನು ಸಂವಾದ ಮತ್ತು ಸಮನ್ವಯದ ಮೂಲಕ ಕಾನೂನು ಚೌಕಟ್ಟಿನಡಿ ಎಲ್ಲರ ವಿಶ್ವಾಸಗಳಿಸಿ ಪರಿಹರಿಸಿದರು. ಬಿಡಿಎ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳೀಯ ನಿವಾಸಿಗಳೊಂದಿಗೆ ನಿರಂತರ ಮಾತುಕತೆ ನಡೆಸಿ ಯೋಜನೆಯ ಮಹತ್ವ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಮನವರಿಕೆ ಮಾಡಿಕೊಟ್ಟಿತು. ತಾಂತ್ರಿಕವಾಗಿ ಸಂಕೀರ್ಣವಾಗಿದ್ದ ಈ ಯೋಜನೆಯಲ್ಲಿ ಅಂಡರ್‌ಪಾಸ್‌ಗಳು, ಸೇತುವೆಗಳು, ಸುರಂಗ ಮಾರ್ಗ ಹಾಗೂ ವಿಶಾಲ ರಸ್ತೆ ಜಾಲ ನಿರ್ಮಾಣ ಸ್ಟಾರ್ ಇನ್ಫೋಟೆಕ್ ಕಂಪನಿಗೂ ಸವಾಲಿನ ಕೆಲಸವಾಗಿತ್ತು. ಹಲವು ಬಾರಿ ಕಾಮಗಾರಿಯ ವೇಳಾಪಟ್ಟಿಯನ್ನು ಮರುಪರಿಶೀಲಿಸಿ, ಗುಣಮಟ್ಟಕ್ಕೆ ಧಕ್ಕೆಯಾಗದಂತೆ ಕಾರ್ಯಗತಗೊಳಿಸಲಾಗಿದೆ.

ಸಾಲು-ಸಾಲು ಸವಾಲು ಗೆದ್ದ ಯೋಜನೆ

ಬಿಡಿಎಯು ಎಸ್.ಎಂ.ಕೃಷ್ಣ ರಸ್ತೆಯನ್ನು 321 ಎಕರೆ ಪ್ರದೇಶದಲ್ಲಿ ರೂಪಿಸಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಮಾರು100 ದಾವೆಗಳು ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿದ್ದು, ಈ ಎಲ್ಲಾ ಪ್ರಕರಣಗಳನ್ನು ಪ್ರಾಧಿಕಾರವು ಸಮರ್ಥ ವಕೀಲರ ಮುಖಾಂತರ ನಿರ್ವಹಿಸಿ ರಸ್ತೆ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.

ರಸ್ತೆಯು ಸೂಲಿಕೆರೆ ಮೀಸಲು ಅರಣ್ಯದಲ್ಲಿ ಹಾದುಹೋಗುತ್ತಿದ್ದು ಸುಮಾರು 2.5 ಎಕರೆ ಅರಣ್ಯ ಪ್ರದೇಶವನ್ನು ರಸ್ತೆಗೆ ಬಳಸಿಕೊಳ್ಳಲಾಗಿದೆ. ಪ್ರಾಣಿ ಸಂಕುಲದ ಚಲನೆಗೆ ದಕ್ಕೆ ಬರದಂತೆ ಪ್ರಾಣಿಗಳಿಗಾಗಿಯೇ ಎರಡು ಕೆಳಸೇತುವೆಯನ್ನು ನಿರ್ಮಿಸಲಾಗಿದೆ. ರಸ್ತೆಯು ಬೆಂಗಳೂರು-ಮೈಸೂರು ಜೋಡಿ ಮಾರ್ಗದ ರೈಲ್ವೆ ಹಳಿಗಳಿಗೆ ಅಡ್ಡಲಾಗಿ ಹಾದುಹೋಗಿದ್ದು, ರೈಲ್ವೆ ಒಡೆತನದ 40.0 ಮೀ. ಉದ್ದ, 14.0 ಮೀ. ಅಗಲದ ಎರಡು ಕೆಳಸೇತುವೆಯನ್ನು ಸ್ಟಾರ್ ಇನ್ಫೋಟೆಕ್ ಕಂಪನಿ ಕೇವಲ ಮೂರು ತಿಂಗಳಲ್ಲಿ ನಿರ್ಮಿಸಿದ್ದನ್ನು ಕಂಡು ರೈಲ್ವೆ ಇಲಾಖೆಯೇ ಅಚ್ಚರಿ ವ್ಯಕ್ತಪಡಿಸಿತು ಎಂದು ಮೂಲಗಳು ತಿಳಿಸಿವೆ.