ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನಲ್ಲಿ ಜಿಲ್ಲಾ ರಂಗಮಂದಿರ ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿ ಕಟ್ಟಡ ನಿರ್ಮಾಣ ಸೇರಿ ಬಿಡುಗಡೆ ಮಾಡಿದ ಒಟ್ಟು 8 ಕೋಟಿ ರು. ಬಳಕೆಯಾಗದ ಹಿನ್ನೆಲೆಯಲ್ಲಿ ಆ ಮೊತ್ತವನ್ನು ವಾಪಸ್ ಮಾಡಲು ಸೂಚನೆ ನೀಡುವಂತೆ ಕೋರಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಪತ್ರ ಬರೆದಿದೆ.2019-20ನೇ ಸಾಲಿನಲ್ಲಿ ಮಂಗಳೂರಿನಲ್ಲಿ ಜಿಲ್ಲಾ ರಂಗ ಮಂದಿರ ನಿರ್ಮಾಣಕ್ಕೆ 5 ಕೋಟಿ ರು. ಹಾಗೂ ಬ್ಯಾರಿ ಸಾಹಿತ್ಯ ಅಕಾಡೆಮಿ ಕಟ್ಟಡ ನಿರ್ಮಾಣಕ್ಕೆ 3 ಕೋಟಿ ರು. ಮೊತ್ತವನ್ನು ದ.ಕ. ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಿತ್ತು. ಆದರೆ ಐದು ವರ್ಷ ಕಳೆದರೂ ಅದು ಬಳಕೆಯಾಗದೆ ದ.ಕ. ಜಿಲ್ಲಾಧಿಕಾರಿ ಖಾತೆಯಲ್ಲಿ ಹಾಗೆಯೇ ಉಳಿದುಕೊಂಡಿದೆ. ಈ ಮೊತ್ತವನ್ನು ಪ್ರಾಧಿಕಾರಕ್ಕೆ ವಾಪಸ್ ನೀಡುವಂತೆ ಪತ್ರ ಬರೆದರೂ ಸ್ಪಂದನ ಸಿಕ್ಕಿಲ್ಲ. ಆದ್ದರಿಂದ ಈ ಮೊತ್ತವನ್ನು ಪ್ರಾಧಿಕಾರದ ಬ್ಯಾಂಕ್ ಖಾತೆಗೆ ಹಿಂದಿರುಗಿಸಲು ಸೂಚಿಸುವಂತೆ ಕೋರಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಜು. 8 ರಂದು ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಮೇ 6 ರಂದು ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಈ ಮೊತ್ತವನ್ನು ವಾಪಸ್ ಪ್ರಾಧಿಕಾರಕ್ಕೆ ಹಿಂದಿರುಗಿಸುವುದು ಮಾತ್ರವಲ್ಲ 2010-11ರಿಂದ ಇಲ್ಲಿ ವರೆಗೆ ದೀರ್ಘಾವಧಿಯಲ್ಲಿ ದ.ಕ. ಜಿಲ್ಲಾಧಿಕಾರಿಗಳಿಗೆ ಬಿಡುಗಡೆಯಾದ ಅನುದಾನವನ್ನು ಹಾಗೆಯೇ ಇರಿಸಿಕೊಂಡು ಕೇರಳ, ಕಾಸರಗೋಡಿನ ಸಂಸ್ಥೆಗಳಿಗೆ ಬಿಡುಗಡೆ ಮಾಡದೇ ಕಾಮಗಾರಿ ಬಾಕಿಯಾಗಲು ಕಾರಣವಾಗಿದೆ ಎಂದು ದೂರು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.ಜಿಲ್ಲಾ ರಂಗ ಮಂದಿರ ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿಗಳ ಕಾಮಗಾರಿಗೆ ಬಿಡುಗಡೆಗೊಳಿಸಿದ 8 ಕೋಟಿ ರು. ಮೊತ್ತವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ನಿರ್ದೇಶನದಂತೆ ಅದೇ ಜಿಲ್ಲಾ ವ್ಯಾಪ್ತಿಯಲ್ಲಿರುವ ಅವಶ್ಯಕ ಕಾಮಗಾರಿಗಳಿಗೆ ತಲಾ 125 ಲಕ್ಷ ರು.ನಂತೆ ಮರು ಹಂಚಿಕೆ ಮಾಡಲಾಗಿದೆ. ಇವುಗಳನ್ನು ಬಿಡುಗಡೆಗೊಳಿಸದೆ ಉದ್ದೇಶಿತ ಕಾಮಗಾರಿ ಜಾರಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಣ ಮರು ಪಾವತಿಗೆ ವಿವರವಾದ ಪತ್ರ ಬರೆದು ಆಗ್ರಹಿಸಲಾಗಿದೆ. ಆದರೂ ಸ್ಪಂದಿಸದ ಕಾರಣ ಈ ಬಗ್ಗೆ ದ.ಕ. ಜಿಲ್ಲಾಡಳಿತಕ್ಕೆ ಸೂಚನೆ ನೀಡುವಂತೆ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ಬರೆದ ದೂರು ಪತ್ರದಲ್ಲಿ ವಿನಂತಿಸಿದ್ದಾರೆ.