ಕನ್ನಡ ಉಳಿಸಲು ಗಡಿಭಾಗದ ಕನ್ನಡಿಗರು ಒಗ್ಗಟ್ಟಾಗಿ: ಬಸವರಾಜ

| Published : Jan 07 2024, 01:30 AM IST

ಸಾರಾಂಶ

ಕರ್ನಾಟಕ ಯುವಗರ್ಜನೆ ರಾಜ್ಯಾಧ್ಯಕ್ಷ ಬಸವರಾಜ ಖಂಡೇಕರ ಸಲಹೆ ನೀಡಿ ಗಡಿಭಾಗದ ಕನ್ನಡಿಗರು ಕನ್ನಡವನ್ನು ಉಳಿಸಲು ಒಗ್ಗಟ್ಟಾಗಬೇಕು ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಗಡಿಭಾಗದ ಕನ್ನಡಿಗರು ಕನ್ನಡವನ್ನು ಉಳಿಸಲು ಒಗ್ಗಟ್ಟಾಗಬೇಕು ಎಂದು ಕರ್ನಾಟಕ ಯುವಗರ್ಜನೆ ರಾಜ್ಯಾಧ್ಯಕ್ಷ ಬಸವರಾಜ ಖಂಡೇಕರ ಹೇಳಿದರು.

ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಇತ್ತೀಚೆಗೆ ಕರ್ನಾಟಕ ಯುವಗರ್ಜನೆ ಸಂಘಟನೆ ವತಿಯಿಂದ ಕರ್ನಾಟಕ ಸುವರ್ಣ ಮಹೋತ್ಸವ 50ರ ಸಂಭ್ರಮದ ಪ್ರಯುಕ್ತ ಗಡಿನಾಡ ಕನ್ನಡಿಗರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಬಲೇಶ್ವರ ಮತಕ್ಷೇತ್ರದಲ್ಲಿ ಒಂದಿಷ್ಟು ಪಟ್ಟಬದ್ಧ ಹಿತಾಸಕ್ತಿಗಳು ಮಹಾರಾಷ್ಟ್ರದ ಯುವಕರ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಗಡಿನಾಡ ಯುವಕರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದಕ್ಕೆ ಯಾರ ಕೈವಾಡವಿದೆ. ತಿಕೋಟಾ ತಾಲೂಕು ಆಡಳಿತ ಕಣ್ಮಚ್ಚಿ ಕುಳಿತಿದೆಯೇ ಎಂದರು.

ಸಾನ್ನಿಧ್ಯ ವಹಿಸಿದ್ದ ಬಾಬು ಮಹಾರಾಜರು ಹೊನವಾಡ ಆಶೀರ್ವಚನ ನೀಡಿ, ಸಣ್ಣ-ಪುಟ್ಟ ಊರಗಳಲ್ಲಿ ಕನ್ನಡದ ಅಭಿಮಾನ ಬೆಳೆಸುವ ಕೆಲಸ ಕರ್ನಾಟಕ ಯುವಗರ್ಜನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಕನ್ನಡದ ಸೇವೆ ಮಾಡೋಣ ಎಂದರು.

ತಿಕೋಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸಿದ್ಧರಾಮಯ್ಯ ಲಕ್ಕುಂಡಿಮಠ ಮಾತನಾಡಿ, 10 ವರ್ಷಗಳಿಂದ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ಬಸವರಾಜ ಎಂ. ಖಂಡೇಕರ ಅವರ ಕಾರ್ಯವನ್ನು ಪ್ರಶಂಸಿಸಿ, ಪ್ರೋತ್ಸಾಹಿಸಬೇಕು ಯುವಕರನ್ನು ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಾಜಿ ಸೈನಿಕ ಮಲ್ಲಪ್ಪ ಯಡವೆ, ಪ್ರವೀಣ ಪವಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಯುವಗರ್ಜನೆಯ ಗೌರವಾಧ್ಯಕ್ಷ ಪ್ರಕಾಶ ಮಿರ್ಜಿ, ಅಡಿವೆಪ್ಪ ಸಲಗಲ, ಜಕ್ಕಪ್ಪ ಯಡವೆ, ಮುತ್ತಪ್ಪ ಶಿವಣ್ಣವರ, ಶರತ ಬಿರಾದಾರ, ಸಂಗಮೇಶ ಜಾಧವ, ಬಸವರಾಜ ತಾಳಿಕೋಟಿ ಮುಂತಾದವರು ಇದ್ದರು.