ಎರಡೂ ಕಿಡ್ನಿ ವೈಫಲ್ಯ: ಸ್ನೇಹಿತರಿಂದ ನಿಧಿ ಸಂಗ್ರಹ

| Published : Jan 16 2025, 12:48 AM IST

ಸಾರಾಂಶ

Both kidneys failing: Fundraising from friends

-ಕಳೆದ 8 ತಿಂಗಳಿನಿಂದ ಬಳಲುತ್ತಿರುವ ಕೊಡೇಕಲ್‌ನ ಯುವಕ ಆಯಾನ್ ಮೊಘಲ್‌

-ಗೆಳೆಯನ ನೋವಿಗೆ ನೆರವಾಗಲು ಮನವಿ

-----

ಅನಿಲ್‌ ಬಿರಾದರ್

ಕನ್ನಡಪ್ರಭ ವಾರ್ತೆ ಕೊಡೇಕಲ್

ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿರುವ ಯುವಕನ ನೆರವಿಗೆ ಧಾವಿಸಿರುವ ಸ್ನೇಹಿತರು, ಆತನ ಚಿಕಿತ್ಸೆಗಾಗಿ ನಿಧಿ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದು, ದಾನಿಗಳ ಮೊರೆ ಹೋಗಿದ್ದಾರೆ.

ಕಳೆದೆಂಟು ತಿಂಗಳುಗಳಿಂದ ತನ್ನ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತ ಕೊಡೇಕಲ್ ಗ್ರಾಮದ ಬಡ ಕುಟುಂಬದ ಯುವಕ ಆಯಾನ್ ಮೊಘಲ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ, ಚಿಕಿತ್ಸೆಗಾಗಿ ಈಗಾಗಲೆ ಲಕ್ಷಗಟ್ಟಲೆ ಹಣವನ್ನು ಹಾಕಿದ್ದು, ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಣದ ಅವಶ್ಯಕತೆಯಿರುವ ಕಾರಣ ಗ್ರಾಮದಲ್ಲಿರುವ ಆತನ ಸಹಪಾಠಿಗಳು ಸೇರಿಕೊಂಡು ನಿಧಿ ಸಂಗ್ರಹ ಮಾಡುವ ಮೂಲಕ ಗೆಳೆಯನ ಚಿಕಿತ್ಸೆಗೆ ಹಣ ಹೊಂದಿಸುತ್ತಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯ ಪ್ರೀತಿ ಕಳೆದುಕೊಂಡು ಅಜ್ಜಿ ನೆರಳಿನಲ್ಲಿ ಬೆಳೆದ ಆಯಾನ್ ಮೊಘಲ್, ಗ್ರಾಮದಲ್ಲಿದ್ದುಕೊಂಡೆ ಐಟಿಐ ತರಬೇತಿ ಪೂರ್ಣಗೊಳಿಸಿ ಇನ್ನೇನು ಖಾಸಗಿಯಾಗಿ ಕೆಲಸ ಮಾಡುವ ಹುಮ್ಮಸ್ಸಿನಲ್ಲಿರುವಾಗಲೆ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿದೆ. ಇದರಿಂದಾಗಿ ಗಾಬರಿಗೊಂಡ ಆತನ ಅಜ್ಜಿ ವಿಜಯಪುರ, ಬಾಗಲಕೋಟೆ ಆಸ್ಪತ್ರೆಗಳಿಗೆ ತೋರಿಸಿದ ವೇಳೆಯಲ್ಲಿ ಆಯಾನ್‌ನ ಎರಡೂ ಕಿಡ್ನಿಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವ ವಿಷಯ ಗೊತ್ತಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಿಸುತ್ತಿದ್ದಾರೆ. ಸದ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೆ 5 ಲಕ್ಷ ರು. ಗಳಿಗಿಂತಲೂ ಹೆಚ್ಚು ಹಣವನ್ನು ಚಿಕಿತ್ಸೆಗೆ ಹಾಕಿದ್ದು, ಇನ್ನೂ ಹೆಚ್ಚಿನ ಹಣದ ಅವಶ್ಯತೆಯಿರುವ ಕಾರಣ ಆಯಾನ್‌ನ ಅಜ್ಜಿಗೆ ದಿಕ್ಕು ತೋಚದಂತಾಗಿ ದೇವರ ಮೇಲೆ ಭಾರ ಹಾಕಿದ್ದಾಳೆ.

ನಿಧಿ ಸಂಗ್ರಹಿಸಿದ ಗೆಳೆಯರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೆಳೆಯ ಆಯಾನ್ ಚಿಕಿತ್ಸೆಗೆ ಇನ್ನು ಹಣದ ಅವಶ್ಯವಿರುವ ಬಗ್ಗೆ ತಿಳಿದುಕೊಂಡ ಆತನ ಗೆಳೆಯರು ಮೊದಲಿಗೆ ತಮ್ಮ ತಮ್ಮಲ್ಲೇ ಹಣ ಸಂಗ್ರಹಿಸಿದ್ದು, ಅದೂ ಸಾಕಾಗದೆ ಇದ್ದಾಗ ಗ್ರಾಮದಲ್ಲಿ ಸಂಚಾರ ಮಾಡುತ್ತಾ ನಿಧಿ ಸಂಗ್ರಹಣೆಗೆ ಮುಂದಾಗುವ ಮೂಲಕ ಗೆಳೆಯನ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ.

ಆಯಾನ್ ಗೆಳೆಯರಾದ ಬಸವರಾಜ ಕೊಂಡಗುಳಿ, ಮೌಲಾಲಿ ಸೈಯದ್, ಶಿವು ದೊರೆ, ದೇವು ಕಕ್ಕೇರಿ, ಹಾಜಿ ಮಲಂಗ್, ಲಾಳೆ ಮಷಾಕ್, ಇಸ್ಮಾಯಿಲ್, ಮಹೇಶ ಹೂಗಾರ, ಸಂಗಮೇಶ ಉಪ್ಪಲದಿನ್ನಿ, ಹಲಕಲ್ಲಗೌಡ, ರಮೇಶ ಪಡಶೆಟ್ಟಿ, ರಾಘವೇಂದ್ರ ರಜಪೂತ , ಅನಿಲ್, ರಮೇಶ ಮಡಿವಾಳರ್, ಅಂಬ್ರೇಶ್ ಪಡಶೆಟ್ಟಿ ಸೇರಿದಂತೆ ಇತರರಿದ್ದರು.

-------

..ಕೋಟ್‌-1..

ನಮ್ಮ ಪ್ರೀತಿಯ ಗೆಳೆಯ ಆಯಾನ್ ಕಡು ಬಡವರಾಗಿದ್ದಾರೆ. ಅಜ್ಜಿಯ ಆಶ್ರಯದಲ್ಲಿ ಬೆಳೆದಿರುವ ಗೆಳೆಯ ಇದೀಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಕಾರಣ ನಾವೆಲ್ಲ ಗೆಳೆಯರು ನಿಧಿ ಸಂಗ್ರಹಿಸಿದ್ದು, ಆತನಿಗೆ ತಲುಪಿಸುತ್ತೇವೆ. ಈಗಾಗಲೇ ಈ ಕುರಿತು ಗ್ರಾಮದ ಹಿರಿಯರಲ್ಲಿಯೂ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದು, ಅವರು ಕೂಡ ನೆರವು ನೀಡಲು ಒಪ್ಪಿದ್ದಾರೆ.

- ರಮೇಶ ದೊರೆ, ಅಯಾನ್‌ ಸ್ನೇಹಿತ.

.....ಬಾಕ್ಸ್‌.....

ಬೇಕಿದೆ ನೆರವಿನ ಹಸ್ತ

ಯುವಕ ಆಯಾನ್ ಮೊಘಲ್ ತನ್ನೆರಡು ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಾ, ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗಾಗಿ ಇನ್ನೂ ಹೆಚ್ಚಿನ ಹಣದ ಅವಶ್ಯಕತೆಯಿರುವ ಕಾರಣ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದು, ಯಾರಾದರೂ ದಾನಿಗಳು ಆರ್ಥಿಕ ನೆರವು ನೀಡ ಬಯಸ್ಸಿದ್ದಲ್ಲಿ ಈ ಕೆಳಗಿನ ಖಾತೆಗೆ ಹಣ ಜಮಾ ಮಾಡಬಹುದು ಎಂದು ಕೋರಿದ್ದಾರೆ.

ಬ್ಯಾಂಕ್‌ ಖಾತೆ ವಿವರ: ಆಯಾನ್ ಮೊಘಲ್, ಕೊಡೇಕಲ್, ಕೆನರಾ ಬ್ಯಾಂಕ್ ಖಾತೆ ಸಂಖ್ಯೆ: 13192210039538, ಐಎಫ್‌ಎಸ್‌ಸಿ: CNRB 0011319, ಫೋನ್‌ ಪೇ ನಂ: 8722141328

-------

15ವೈಡಿಆರ್1

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊಡೇಕಲ್ ಗ್ರಾಮದ ಯುವಕ ಆಯಾನ್ ಮೊಘಲ್.

15ವೈಡಿಆರ್2

ಸ್ನೇಹಿತ ಆಯಾನ್ ಚಿಕಿತ್ಸೆಗಾಗಿ ಮಂಗಳವಾರ ನಿಧಿ ಸಂಗ್ರಹಿಸುತ್ತಿರುವ ಆಯಾನ್ ಗೆಳೆಯರ ಬಳಗ.