ಸಾರಾಂಶ
ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ವೇಳೆ ಅಶೋಕ ನಗರದ ಆರ್ಬರ್ ಬ್ರೀವಿಂಗ್ ಪಬ್‌ನ ಬೌನ್ಸರ್‌ಗಳು ಇಬ್ಬರು ಪಾನಮತ್ತ ಗ್ರಾಹಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ದೆಹಲಿ ಮೂಲದ ಖಾಸಿಸ್ ರೋಸ್ತಗಿ(32) ಮತ್ತು ಆತನ ಸ್ನೇಹಿತ ಇಮಾಂಶು (30) ಗಾಯಗೊಂಡ ಗ್ರಾಹಕರು. ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಆರ್ಬರ್ ಬ್ರೀವಿಂಗ್ ಪಬ್‌ನ ಬೌನ್ಸರ್‌ಗಳಾದ ಕೆ. ಶ್ರೀನಿವಾಸ್(44), ಅಲೆಕ್ಸಾಂಡರ್ ಅಲಿಯಾಸ್ ಮ್ಯಾಥ್ಯು (33), ಚಾಲಕ ರಘು (34) ಮತ್ತು ಸೆಕ್ಯೂರಿಟಿ ಸಂತೋಷ್ ಸಿಂಗ್(42)ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?:
ಹಲ್ಲೆಗೊಳಗಾದ ದೆಹಲಿ ಮೂಲದ ಖಾಸಿಸ್ ರೋಸ್ತಗಿ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈತನ ಸ್ನೇಹಿತ ಇಮಾಂಶು ಪ್ರವಾಸ ನಿಮಿತ್ತ ವಾರದ ಹಿಂದೆಯೇ ಬೆಂಗಳೂರಿಗೆ ಬಂದಿದ್ದರು. ಬುಧವಾರ ರಾತ್ರಿ ಈ ಇಬ್ಬರೂ ಅಶೋಕನಗರ ಆರ್ಬರ್ ಪಬ್‌ಗೆ ತೆರಳಿ, ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ತಡರಾತ್ರಿ ಸುಮಾರು 12.30ಕ್ಕೆ ಮನೆಗೆ ಹೊರಡಲು ಪಬ್‌ನಿಂದ ಹೊರಗೆ ಬಂದು ಪಾರ್ಕಿಂಗ್ ಸ್ಥಳದಲ್ಲಿ ಮಾತನಾಡುತ್ತಿದ್ದರು.
ಈ ವೇಳೆ ಪಬ್‌ನ ಬೌನ್ಸರ್‌ಗಳು ಅಲ್ಲಿಗೆ ಬಂದಿದ್ದು, ಈಗಾಗಲೇ ಸಮಯವಾಗಿದೆ. ಇಲ್ಲಿಂದ ತೆರಳಿ ಎಂದು ಸೂಚಿಸಿದ್ದಾರೆ. ಈ ವೇಳೆ ಖಾಸಿಸ್, ಇಮಾಂಶು ಮತ್ತು ಬೌನ್ಸರ್‌ಗಳ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಬೌನ್ಸರ್‌ಗಳು ರಾಡ್ ಮತ್ತು ಹೆಲ್ಮೆಟ್‌ನಿಂದ ಖಾಸಿಸ್ ಮತ್ತು ಇಮಾಶು ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಇಬ್ಬರಿಗೂ ಗಾಯವಾಗಿ ರಕ್ತಸ್ರಾವವಾಗಿದೆ.
ಆಸ್ಪತ್ರೆಗೆ ಕರೆದೊಯ್ದ ಪೊಲೀಸರು:
ಪಬ್‌ನಲ್ಲಿ ಗಲಾಟೆ ವಿಚಾರ ತಿಳಿದು ಇಬ್ಬರು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಗಲಾಟೆ ನಿಲ್ಲಿಸಿ ಸಮಾಧಾನಪಡಿಸಿದ್ದಾರೆ. ಗಾಯಾಳುಗಳಿಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಘಟನೆ ಸಂಬಂಧ ಆರಂಭದಲ್ಲಿ ಪೊಲೀಸರು ಯಾವುದೇ ದೂರು ದಾಖಲಿಸದೆ ನಿರ್ಲಕ್ಷ್ಯ ತೋರಿದ್ದರು. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತು ಬಳಿಕ ಗಾಯಾಳುವಿನಿಂದ ದೂರು ಪಡೆದು, ನಾಲ್ವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಪೊಲೀಸರಿಂದಲೇ ಹಲ್ಲೆ ಆರೋಪ?
ವೈದ್ಯೆ ವಂಶಿಕಾ ಮೊಗಾ ಎಂಬುವವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪಬ್ ಗಲಾಟೆ ವಿಡಿಯೋ ಹಂಚಿಕೊಂಡಿದ್ದು, ಪೊಲೀಸ್ ಅಧಿಕಾರಿ ಜೆ.ಪಿ.ಪವರ್ ಇಬ್ಬರು ಗ್ರಾಹಕರ ಮೇಲೆ ಕಬ್ಬಿಣದ ರಾಡ್ ಮತ್ತು ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಬಳಿಕ ಗಾಯಾಳುಗಳು ದೂರು ನೀಡಲು ಮುಂದಾದಾಗ ದೂರು ಸ್ವೀಕರಿಸದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಪೋಸ್ಟ್ ಅನ್ನು ನಗರ ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಎಚ್ಚೆತ್ತ ಅಶೋಕನಗರ ಠಾಣೆ ಪೊಲೀಸರು, ಗಾಯಾಳುಗಳಿಂದ ದೂರು ಸ್ವೀಕರಿಸಿ, ಎಫ್‌ಐಆರ್ ದಾಖಲಿಸಿದ್ದಾರೆ. ಬಳಿಕ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.ಪೊಲೀಸ್ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆ ಎಂಬುದು ಸುಳ್ಳು. ಘಟನೆ ಸಂಬಂಧ ನೀಡಲಾದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ, ಬೌನ್ಸರ್‌ಗಳನ್ನು ಬಂಧಿಸಲಾಗಿದೆ.
-ಎಚ್.ಟಿ.ಶೇಖರ್, ಡಿಸಿಪಿ ಕೇಂದ್ರ ವಿಭಾಗ.