ಅಂಗಡಿ ಮುಂದಿನ ರಸ್ತೆ ಬದಿಯಲ್ಲಿ ಸೈಕಲ್ ಮೇಲೆ ಕುಳಿತು ಆಟವಾಡುತ್ತಿದ್ದ ಪುಟ್ಟ ಬಾಲಕನ ಮೇಲೆ ಎಲೆಕ್ಟ್ರಿಕ್ ಕಾರೊಂದು ಹರಿದ ಪರಿಣಾಮ ಮಗು ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಅಂಗಡಿ ಮುಂದಿನ ರಸ್ತೆ ಬದಿಯಲ್ಲಿ ಸೈಕಲ್ ಮೇಲೆ ಕುಳಿತು ಆಟವಾಡುತ್ತಿದ್ದ ಪುಟ್ಟ ಬಾಲಕನ ಮೇಲೆ ಎಲೆಕ್ಟ್ರಿಕ್ ಕಾರೊಂದು ಹರಿದ ಪರಿಣಾಮ ಮಗು ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ತಾಲೂಕಿನ ನಿಟ್ಟೂರಿನ ರಾಘವೇಂದ್ರ ಜವಳಿ ಅಂಗಡಿಯ ಮಾಲೀಕ ಮೋಹನ್ ಕುಮಾರ್ ಅವರ ಮಗ ಶೋಭಿತ್ ರಾಘವ್ (13) ಮೃತಪಟ್ಟ ದುರ್ದೈವಿ. ನಿಟ್ಟೂರು ಗ್ರಾಮದಲ್ಲಿ ಬಟ್ಟೆ ಅಂಗಡಿ ವ್ಯಾಪಾರ ನಡೆಸಿದ್ದ ಮೋಹನ್ ಕುಮಾರ್ ಅವರು ಶಾಲೆಗೆ ರಜೆ ಇದ್ದ ಕಾರಣ ಮಗನನ್ನು ಕೂಡ ಅಂಗಡಿಯ ಬಳಿ ಕರೆದುಕೊಂಡು ಬಂದಿದ್ದರು. ಅಂಗಡಿಯ ಮುಂದೆ ತನ್ನ ಸೈಕಲ್ ನಲ್ಲಿ ಕುಳಿತು ಆಟವಾಡುತ್ತಿದ್ದ ಸಂದರ್ಭದಲ್ಲಿ ಯಮ ಸ್ವರೂಪಿಯಾಗಿ ಬಂದ ಕಾರು ಏಕಾಏಕಿ ಬಾಲಕನ ಮೇಲೆ ಹರಿದಿದೆ. ತೀವ್ರ ಗಾಯಗೊಂಡ ಬಾಲಕನ ಹೆಚ್ಚಿನ ಚಿಕಿತ್ಸೆಗಾಗಿ ಗುಬ್ಬಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಧಾವಿಸಿದ ಗುಬ್ಬಿ ಪೊಲೀಸರು ಕಾರಿನ ಚಾಲಕನ ವಿರುದ್ಧ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.