ಮಧ್ಯಾಹ್ನ ಮನೆಯ ಮುಂದೆ ಆಟವಾಡುತ್ತಿದ್ದ ಮೌರ್ಯ, ಮನೆಯ ಆವರಣದಲ್ಲಿದ್ದ ಕಾಫಿ ಪಲ್ಪರ್ ಮಾಡುವ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ.
ಸಕಲೇಶಪುರ: ಕಾಫಿ ಪಲ್ಪರ್ ಮಾಡುವ ತೊಟ್ಟಿಗೆ ಬಿದ್ದು ಆರು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಮೌರ್ಯ (6) ಮೃತ ಬಾಲಕನಾಗಿದ್ದು, ತಿಲಕ್– ವಂದಿತಾ ದಂಪತಿಯ ಏಕೈಕ ಪುತ್ರನಾಗಿದ್ದಾನೆ. ಮಧ್ಯಾಹ್ನ ಮನೆಯ ಮುಂದೆ ಆಟವಾಡುತ್ತಿದ್ದ ಮೌರ್ಯ, ಮನೆಯ ಆವರಣದಲ್ಲಿದ್ದ ಕಾಫಿ ಪಲ್ಪರ್ ಮಾಡುವ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ತೊಟ್ಟಿಯಲ್ಲಿದ್ದ ನೀರಿನಲ್ಲಿ ಮುಳುಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಸಕಲೇಶಪುರ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.