ಸಾರಾಂಶ
ಪಾವಗಡ: ವೈದ್ಯರ ನಿರ್ಲಕ್ಷ್ಯದಿಂದ 7 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತ ಬಾಲಕನ ಪೋಷಕರು ಹಾಗೂ ಸಂಬಂಧಿಕರು ಪಟ್ಟಣದ ಖಾಸಗಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಪಾವಗಡ: ವೈದ್ಯರ ನಿರ್ಲಕ್ಷ್ಯದಿಂದ 7 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತ ಬಾಲಕನ ಪೋಷಕರು ಹಾಗೂ ಸಂಬಂಧಿಕರು ಪಟ್ಟಣದ ಖಾಸಗಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಇಲ್ಲಿನ ಕಾವಲುಗೆರೆಯ ನಿವಾಸಿ ಕುಮಾರ್ ಅವರ ಪುತ್ರ ಕರುಣಾಕರ (7) ಫೆ.3ರಂದು ಜ್ವರ ಬಂದಿದ್ದು ಆಗ ಪೋಷಕರು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ದು, ಆಗ ಅಲ್ಲಿನ ವೈದ್ಯರು ಡೆಂಘೀ ಚಿಕಿತ್ಸೆ ನೀಡಿದ್ದರು. ಆದರೆ ಜ್ವರ ಕಡಿಮೆ ಆಗದ ಹಿನ್ನೆಲೆಯಲ್ಲಿ ಬುಧವಾರ ಮತ್ತೆ ಬಾಲಕನನ್ನು ಕರೆದುಕೊಂಡು ಅದೇ ಆಸ್ಪತ್ರೆಗೆ ಹೋಗಿದ್ದರು. ಆಗ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ಕರೆದೊಯ್ಯುವಂತೆ ತಿಳಿಸಿದ್ದರು. ಪೋಷಕರು ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಇದರಿಂದ ಆಕ್ರೋಶಗೊಂಡ ಪೋಷಕರು ಹಾಗೂ ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.