ಸಾರಾಂಶ
ಕಸಾಪಗೆ ಅಸಮರ್ಥ ಅಧ್ಯಕ್ಷರು । ಜಗಳೂರಿನ ಕವಿ, ಸಾಹಿತಿ, ಲೇಖಕರ ಕಡೆಗಣನೆಗೆ ತೀವ್ರ ಆಕ್ರೋಶ
ಕನ್ನಡಪ್ರಭ ವಾರ್ತೆ ದಾವಣಗೆರೆಜಗಳೂರಿನಲ್ಲಿ ಜ.11 ಮತ್ತು 12ರಂದು ನಡೆಯುವ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ಸಾಹಿತ್ಯಿಕ ಮಾನದಂಡಗಳನ್ನೂ ಉಲ್ಲಂಘಿಸಿ, ಕೆಲವೇ ಕೆಲವರ ಸ್ವಹಿತಾಸಕ್ತಿಗಾಗಿ ಸಮ್ಮೇಳನ ನಡೆಸಲು ಹೊರಟ ಹಿನ್ನೆಲೆಯಲ್ಲಿ ಸಮ್ಮೇಳನವನ್ನೇ ಬಹಿಷ್ಕರಿಸಲಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯ, ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಎಚ್ಚರಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಜಗಳೂರು ತಾಲೂಕಿನ ಸ್ಥಳೀಯ ಸಾಹಿತಿಗಳನ್ನೇ ಕಡೆಗಣಿಸಿದ್ದು, ಎಲ್ಲಾ ಸಾಹಿತ್ಯಿಕ ಮಾನದಂಡಗಳನ್ನು ಕಡೆಗಣಿಸಿ, ಕೆಲವರ ಸ್ವಹಿತಾಸಕ್ತಿಗಾಗಿ ಸಮ್ಮೇಳನವನ್ನು ಆಯೋಜಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಹೇಳಿದರು.ಅಸಮರ್ಥರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದರೆ ಏನಾಗಬೇಕೋ ಅದೇ ಆಗುತ್ತದೆಂಬುದಕ್ಕೆ ಜಗಳೂರಿನ ಸಮ್ಮೇಳನ ಸಾಕ್ಷಿಯಾಗುತ್ತಿದೆ. ಪರಿಷತ್ ಅಧ್ಯಕ್ಷರ ಅಸಮರ್ಥತೆಗೆ ಪೂರಕವಾಗಿ ರಾಜಕೀಯ ಪುಡಾರಿತನ ಮೇಲುಗೈ ಪಡೆಯುತ್ತಿದೆ. ಇದು ಖಂಡಿತವಾಗಿಯೂ ಸಾಹಿತ್ಯ ಸಮಾವೇಶವಾಗಿರುವುದಿಲ್ಲ. ತಮ್ಮ ಮಾತಿಗೆ ಇಂಬು ನೀಡುವಂತೆ ಈಗಾಗಲೇ ಆಹ್ವಾನ ಪತ್ರಿಕೆಯಲ್ಲೇ ಇದೆಲ್ಲವೂ ಬಿಂಬಿತವಾಗಿದೆ. ಈಗಾಗಲೇ 2-3 ಸಲ ಆಹ್ವಾನ ಪತ್ರ ಬದಲಾವಣೆ ಮಾಡಿದ್ದರೂ ಏನೂ ಉಪಯೋಗವಾಗಿಲ್ಲ ಎಂದು ದೂರಿದರು.
ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು 3 ದಶಕಗಳ ನಂತರ ಜಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಂದೆ ಚಿತ್ರದುರ್ಗ ಜಿಲ್ಲಾ ಸಮ್ಮೇಳನ ನಡೆದಿದ್ದು ಬಿಟ್ಟರೆ, ದಾವಣಗೆರೆ ಜಿಲ್ಲೆಯ ಪ್ರಥಮ ಸಮ್ಮೇಳನ ಇದಾಗಿದೆ. ಜಗಳೂರು ಬರ ಪೀಡಿತವಾಗಿರಬಹುದು. ಆದರೆ, ಅಲ್ಲಿ ಪ್ರಸಿದ್ಧ ಬರಹಗಾರರು, ಕವಿಗಳು, ಲೇಖಕರೂ ಇದ್ದಾರೆ. ಆದರೆ, ಸಮ್ಮೇಳನ ನಡೆಯುವ ತಾಲೂಕಿನ ಸಾಹಿತಿಗಳು, ಕವಿ, ಸಾಹಿತಿಗಳನ್ನೇ ಸಮ್ಮೇಳನ, ಸಭೆ, ಗೋಷ್ಟಿಗಳಿಂದಲೇ ದೂರ ಇಡಲಾಗಿದೆ. ಅಸಮರ್ಥ ಅಧ್ಯಕ್ಷರ ಅಧಿಕಾರಾವಧಿಯಲ್ಲಿ ಇದೆಲ್ಲಾ ಸಾಧ್ಯ ಎಂದು ಟೀಕಿಸಿದರು.ಜಗಳೂರು ಶಾಸಕ ಬಿ.ದೇವೇಂದ್ರಪ್ಪನವರೇ ಮುಂಚೂಣಿಯಲ್ಲಿ ನಿಂತು, ವಿಶೇಷ ಜವಾಬ್ಧಾರಿ ವಹಿಸಿಕೊಂಡು ಲಕ್ಷ ಲಕ್ಷ ರು.ಗಳನ್ನು ವೆಚ್ಚ ಮಾಡಿ, ಸಮ್ಮೇಳನದ ಜೊತೆಗೆ ಜಲೋತ್ಸವವನ್ನೂ ಪೋಣಿಸಿ ಮಾಡುತ್ತಿರುವ ಈ ಜಾತ್ರೆಯಲ್ಲಿ ಜಗಳೂರು ತಾಲೂಕಿನ ಸ್ವಾಭಿಮಾನವನ್ನು ಜಾಣ್ಮೆಯಿಂದ ಮರೆತಿದ್ದು ಮಾತ್ರ ಖಂಡನೀಯ. ಜಿಲ್ಲೆಯಲ್ಲಿ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಹೆಸರು ಮಾಡಿದ ಹಿರಿಯ ಸಾಹಿತಿಗಳು, ಲೇಖಕರು, ವಿಮರ್ಶಕರು, ಅಂಕಣಕಾರನ್ನು ಉದ್ದೇಶ ಪೂರ್ವಕವಾಗಿಯೇ ನಿರ್ಲಕ್ಷ್ಯ ಮಾಡಿ, ಅನ್ಯ ಜಿಲ್ಲೆಯವರಿಗೆ ಮಣೆ ಹಾಕಲಾಗಿದೆ ಎಂದು ಆರೋಪಿಸಿದರು.
ತಮಗೆ ಬೇಕಾದವರಿಗೆ ಎರಡೆರೆಡು ಕಡೆ ಅವಕಾಶ ಕೊಟ್ಟು, ಮೂರ್ಖತನ ಮೆರೆಯಲಾಗಿದೆ. ಕಸಾಪ ಜಿಲ್ಲಾಧ್ಯಕ್ಷರಾಗಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಿದ್ದ, ಪರಿಷತ್‌ಗಾಗಿ ದುಡಿದಿದ್ದ ಹಿರಿಯರನ್ನೇ ಮರೆತಿದ್ದಾರೆ. ಗೆಳೆತನ, ಗುರುತನ, ಜನತನಗಳು ಮುಪ್ಪುರಿಗೊಂಡ ಅಂತರ್ಜಿಲ್ಲಾ ಸಮ್ಮೇಳನ ಇದಾಗಿದೆ. ಜಾನಪದ ಸಾಹಿತ್ಯದ ಕಣಜದ ಆಗರವಾದ ಜಗಳೂರು ತಾಲೂಕಿನಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದರೊಂದಿಗೆ ಎಲೆ ಮರೆಯ ಕಾಯಿಯಂತಿರುವ ಜನಪದ ಕಥೆಗಾರರು, ಕಥೆಗಾರ್ತಿಯರು, ಹಾಡುಗಾರರನ್ನೇ ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಒಂದು ಸಾಂಸ್ಕೃತಿಕ ಪರಂಪರೆಗೆ ಮಾಡಿದ ದೊಡ್ಡ ಅಪಮಾನ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಾಹಿತ್ಯ ಸಮ್ಮೇಳನಗಳು ಇದೇ ರೀತಿ ನಡೆದರೆ ರಾಜಕೀಯ ಪುಡಾರಿತನ ಸಮಾವೇಶಕ್ಕೂ, ಇಂತಹ ಸಾಹಿತ್ಯ ಸಮಾವೇಶಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಇಂತಹ ಬೆಳವಣಿಗೆ, ಪರಂಪರೆಯನ್ನು ಖಂಡಿಸುತ್ತೇವೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಬಸಪ್ಪ, ಸಂಗೇನಹಳ್ಳಿ ಅಶೋಕಕುಮಾರ, ಜಿ.ಎಸ್.ಸುಭಾಶ್ಚಂದ್ರ ಬೋಸ್, ಪ್ರೊ.ಜೆ.ಯಾದವ ರೆಡ್ಡಿ, ಎ.ಕೆ.ರೆಡ್ಡಿ, ಹಿರಿಯ ಪತ್ರಕರ್ತ ಅಣಬೂರು ಮಠದ ಕೊಟ್ರೇಶ, ತಾಪಂ ಮಾಜಿ ಅಧ್ಯಕ್ಷ ಎಂ.ಆರ್.ಪುಟ್ಟಣ್ಣ ಇತರರು ಇದ್ದರು.