ವಿವಾಹಿತಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ 8 ವರ್ಷದಿಂದ ಬಹಿಷ್ಕಾರ!

| N/A | Published : May 18 2025, 01:49 AM IST / Updated: May 18 2025, 05:34 AM IST

ವಿವಾಹಿತಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ 8 ವರ್ಷದಿಂದ ಬಹಿಷ್ಕಾರ!
Share this Article
  • FB
  • TW
  • Linkdin
  • Email

ಸಾರಾಂಶ

ವಿವಾಹಿತಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ ಎನ್ನುವ ಕಾರಣಕ್ಕಾಗಿ 8 ವರ್ಷಗಳಿಂದ ಪರ್ವತ ಮಲ್ಲಯ್ಯ ಸಮಾಜದ ಕುಟುಂಬವೊಂದನ್ನು ಅದೇ ಸಮಾಜ ಬಹಿಷ್ಕರಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:  ವಿವಾಹಿತಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ ಎನ್ನುವ ಕಾರಣಕ್ಕಾಗಿ 8 ವರ್ಷಗಳಿಂದ ಪರ್ವತ ಮಲ್ಲಯ್ಯ ಸಮಾಜದ ಕುಟುಂಬವೊಂದನ್ನು ಅದೇ ಸಮಾಜ ಬಹಿಷ್ಕರಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪ್ರೀತಿಸಿ ಮದುವೆಯಾದ ಜೋಡಿ ಗ್ರಾಮದ ಹೊರವಲಯದಲ್ಲಿ ಶೆಡ್‌ನಲ್ಲಿ ವಾಸಿಸುತ್ತಿದೆ. ತಾಲೂಕಿನ ಚಿಲಕಮುಕ್ಕಿ ಗ್ರಾಮದಲ್ಲಿ ಇಂತಹದೊಂದು ಅಮಾನವೀಯ ಘಟನೆ ನಡೆದಿದೆ. ಹನುಮಂತಪ್ಪ, ಮಂಜುಳಾ ಹುಳ್ಳಿ ದಂಪತಿ ಹಾಗೂ ಇವರ ತಂದೆ-ತಾಯಿ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಕಳೆದ 8 ವರ್ಷದಿಂದ ಊರೂರು ಅಲೆದಿದ್ದ ಈ ಕುಟುಂಬ ಇದೀಗ ಗ್ರಾಮದ ಹೊರವಲಯದಲ್ಲಿ ಜೀವನ ನಡೆಸುತ್ತಿದೆ.

ಆಗಿದ್ದೇನು?

ಶಿವಾಜಿ ಹಾಗೂ ಗಂಗಮ್ಮಳ ಮಗ ಹನುಮಂತಪ್ಪ ತಮ್ಮೂರಿನಲ್ಲಿಯೇ ಯುವತಿಯನ್ನು ಪ್ರೀತಿಸುತ್ತಿದ್ದ. ಇವರ ಪ್ರೀತಿಗೆ ಹುಡುಗಿ ಮನೆಯವರು ಒಪ್ಪದೆ ಬೇರೊಬ್ಬನ ಜತೆ ಮದುವೆ ಮಾಡಿದ್ದರು. ಆದರೆ, ಆ ಹುಡುಗಿ ಹನುಮಂತಪ್ಪನ ಜತೆಗೆ ಮದುವೆಯಾಗಿ ಓಡಿಹೋಗಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಹುಳ್ಳಿ ಕುಟುಂಬಕ್ಕೆ ಪರ್ವತಮಲ್ಲಯ್ಯ ಸಮಾಜ 8 ವರ್ಷದ ಹಿಂದೆ ಬಹಿಷ್ಕಾರ ಹಾಕಿದೆ.

ಕೆಲ ದಿನಗಳ ಹಿಂದೆ ರಾಜಿ ಪಂಚಾಯಿತಿ ನಡೆದು ಅವರ ಮನೆಗೆ ಬೇಕಾದವರು ಹೋಗಬಹುದು ಎಂದು ತೀರ್ಮಾನಿಸಲಾಗಿದೆ. ಅದರಂತೆ ಹುಳ್ಳಿ ಕುಟುಂಬದಲ್ಲಿ ಮಾಡಿದ ದೇವರ ಕಾರ್ಯಕ್ಕೆ ನಾಲ್ಕಾರು ಕುಟುಂಬದವರು ಹೋಗಿ ಊಟ ಮಾಡಿ ಬಂದಿದ್ದರು. ಈಗ ಈ ನಾಲ್ಕಾರು ಕುಟುಂಬ ಸೇರಿದಂತೆ ಹುಳ್ಳಿ ಮನೆಯಲ್ಲಿ ಯಾರ್ಯಾರು ಊಟ ಮಾಡಿದ್ದಾರೆ ಅವರೆಲ್ಲರಿಗೂ ಬಹಿಷ್ಕರ ಹಾಕಲಾಗಿದೆ. ಇದೀಗ ಗ್ರಾಪಂ ಮಾಜಿ ಸದಸ್ಯ ಶಂಕ್ರಪ್ಪ ಬೋಗಿ ಅವರಿಗೂ ಬಹಿಷ್ಕಾರದ ಬಿಸಿ ತಟ್ಟಿದೆ. ಇವರನ್ನು ಸಹ ಈಗ ಯಾರೂ ಕರೆಯುತ್ತಿಲ್ಲ.

ಹೆತ್ತವರ ಕಣ್ಣೀರು:

ಹನುಮಂತಪ್ಪನ ತಂದೆ ಶಿವಾಜಿ, ತಾಯಿ ಗಂಗಮ್ಮ ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಜನಾಂಗದಲ್ಲಿ ನಮ್ಮನ್ನು ಸೇರಿಸಿ ಪುಣ್ಯಕಟ್ಟಿಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದಾರೆ. ನಮ್ಮ ಮನೆಯಲ್ಲಿ ಸತ್ತರೂ, ಹಬ್ಬ ಮಾಡಿದರೂ, ಕಾರ್ಯ ಮಾಡಿದರೂ ಯಾರು ಬರುವಂತೆ ಇಲ್ಲ. ನಾವು ಸಹ ಬೇರೆಯವರ ಮನೆಗೆ ಹೋಗುವಂತಿಲ್ಲ. ಇದು ನಮ್ಮದೇ ಹಿರಿಯರು ಹಾಕಿರುವ ಕಟ್ಟಪ್ಪಣೆಯಾಗಿದೆ. ನಾವು ದಂಡ ಕಟ್ಟಿ ನಮ್ಮ ಜನರ ಜತೆಗೆ ಸೇರಲು ಸಿದ್ಧರಿದ್ದೇವೆ. ಆದಕ್ಕೂ ಅವಕಾಶ ನೀಡದೆ ನಮ್ಮನ್ನು ದೂರವಿಟ್ಟಿದ್ದಾರೆ ಎನ್ನುತ್ತಾರೆ ಗಂಗಮ್ಮ.

ನಾವೇನು ತಪ್ಪು ಮಾಡಿದ್ದೇವೆ, ನಮ್ಮ ಮಗ ಪ್ರೀತಿಸಿ ಮದುವೆಯಾಗಿದ್ದನ್ನೇ ಮುಂದಿಟ್ಟುಕೊಂಡು 8 ವರ್ಷದಿಂದ ಬಹಿಷ್ಕಾರ ಹಾಕಿದ್ದಾರೆ. ಇದರಿಂದ ನಮಗೆ ಮುಕ್ತಿ ಕೊಡಿ. ನಮ್ಮನ್ನು ಎಲ್ಲರಂತೆ ಬಾಳಲು ಬಿಡಿ.

ಗಂಗಮ್ಮ ಹುಳ್ಳಿ

ನಮ್ಮ ಮಗ ಪ್ರೀತಿಸಿ ಮದುವೆಯಾಗಿದ್ದು ನಿಜ. ಆದರೆ, ಅದಕ್ಕೇನಾದರೂ ದಂಡ ಹಾಕಿ ಎಂದರೂ ಹಾಕುತ್ತಿಲ್ಲ. ಬಹಿಷ್ಕಾರ ಹಿಂಪಡೆಯುತ್ತಿಲ್ಲ. ನಮ್ಮ ಮನೆಗೆ ಬಂದು ಊಟ ಮಾಡಿದವರಿಗೂ ಈಗ ಬಹಿಷ್ಕಾರ ಹಾಕಿದ್ದಾರೆ.

ಶಿವಾಜಿ ಹುಳ್ಳಿ

ರಾಜೀ ಪಂಚಾಯಿತಿ ಮಾಡಿ ಇತ್ಯರ್ಥ ಮಾಡಿದ ಮೇಲೆ ಅವರ ಮನೆಗೆ ಹೋಗಿ ದೇವರ ಕಾರ್ಯದಲ್ಲಿ ಭಾಗವಹಿಸಿ ಊಟ ಮಾಡಿದ್ದೇವೆ. ಈಗ ನಮಗೂ ಬಹಿಷ್ಕಾರ ಹಾಕಿದ್ದಾರೆ.

ಶಂಕ್ರಪ್ಪ ಬೋಗಿ, ಮಾಜಿ ಗ್ರಾಪಂ ಸದಸ್ಯ

Read more Articles on