ಸಾರಾಂಶ
ಬೆಂಗಳೂರು : ಶಕ್ತಿ ಯೋಜನೆಯಡಿ ವಯೋಮಿತಿಗೊಳಪಡಿಸಿ ಗಂಡು ಮಕ್ಕಳಿಗೂ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಉಚಿತ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಮುಂದೆ ಕ್ರಮ ವಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ 135ನೇ ಜಯಂತಿ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ವಿಧಾನಸೌಧದಲ್ಲಿ ಗುರುವಾರ ಆಯೋಜಿಸಿದ್ದ ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉಪಮುಖ್ಯಮಂತ್ರಿಗಳು ಈ ಭರವಸೆ ನೀಡಿದರು.
ನೀಲಸಂದ್ರದ ಬಿಬಿಎಂಪಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಚರಣ್, ‘ನಿಮ್ಮ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೀರಿ. ಅದರಲ್ಲಿ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ಉಚಿತ ಸಂಚಾರಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದ್ದೀರಿ. ಇದರಿಂದ ನಮ್ಮ ಅಮ್ಮ, ಅಕ್ಕ, ತಂಗಿಯರು, ಸ್ನೇಹಿತೆಯರಿಗೆ ಅನುಕೂಲ ಆಗುತ್ತಿದೆ. ಗಂಡು ಮಕ್ಕಳಿಗಾಗಿ ಯಾವುದೇ ಯೋಜನೆ ಇಲ್ಲವೇ?‘ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಅವರು, ‘ನಿಮ್ಮ ತಾಯಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ₹2000, ಅನ್ನಭಾಗ್ಯದಡಿ 10 ಕೇಜಿ ಅಕ್ಕಿ, ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್, ಎಲ್ಲ ಹೆಣ್ಣು ಮಕ್ಕಳಿಗೂ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗುತ್ತಿದೆ. ಈಗ ನೀನು ಕೇಳಿರುವ ಪ್ರಶ್ನೆಗೆ, ಶಕ್ತಿ ಯೋಜನೆಯಡಿ ಒಂದು ವಯೋಮಾನದ ವರೆಗಿನ ಗಂಡು ಮಕ್ಕಳಿಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಯೋಚಿಸಿ ಮುಂದೆ ಕ್ರಮವಹಿಸಲಾಗುವುದು’ ಎಂದರು.
ನಾನೂ ಸಿಎಂ ಆಗಬೇಕೆಂದ ವಿದ್ಯಾರ್ಥಿ: ಪಂಚಶೀಲನಗರದ ಪಾಲಿಕೆ ಹಿರಿಯ ಪ್ರಾಥಮಿಕ ಶಾಲೆ 7ನೇ ತರಗತಿ ವಿದ್ಯಾರ್ಥಿ ವಿದ್ಯಾಸಾಗರ್, ‘ನಾನು ಈ ರಾಜ್ಯದ ಸಿಎಂ ಆಗಬೇಕು, ಇದಕ್ಕಾಗಿ ಏನು ಓದಬೇಕು?’ ಎಂದು ಪ್ರಶ್ನಿಸಿದರು.
ಇದಕ್ಕೆ ಸಲಹಾತ್ಮಕ ಉತ್ತರ ನೀಡಿದ ಡಿ.ಕೆ.ಶಿವಕುಮಾರ್ ಅವರು, ‘ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರು ಆಗಬಹುದು. ನಮ್ಮ ತಂದೆ ರೈತರಾಗಿದ್ದರು, ನಾನು ಈಗ ಉಪಮುಖ್ಯಮಂತ್ರಿ ಆಗಿದ್ದೇನೆ. ನಿಮ್ಮ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕಾದರೆ ಗುಣಮಟ್ಟದ ಶಿಕ್ಷಣ, ಆರ್ಥಿಕ ಸ್ಥಿತಿ ಹಾಗೂ ನಾಯಕತ್ವದ ಗುಣ ಬೆಳಸಿಕೊಳ್ಳಬೇಕು. ಆಗ ನೀವೂ ಮುಂದೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು, ಐಎಎಸ್ ಅಧಿಕಾರಿಗಳು ಆಗಬಹುದು’ ಎಂದರು.
‘ಇವತ್ತು ನೀವು ವಿಶೇಷವಾದ ಶಕ್ತಿ ಸ್ಥಳದಲ್ಲಿ ಕುಳಿತಿದ್ದೀರಿ. ಇಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗ ಮುಖಾಮುಖಿಯಾಗಿವೆ. ಹೈಕೋರ್ಟಿನ ಮುಂಭಾಗ ವಿಧಾನಸೌಧವಿದೆ. ಇಡೀ ಜಗತ್ತಿನಲ್ಲಿಯೇ ಈ ರೀತಿಯ ಸಂಗತಿ ಎಲ್ಲೂ ಕಾಣಿಸಲು ಸಾಧ್ಯವಿಲ್ಲ. ಈ ಸ್ಥಳ ನಿಮಗೆ ಸ್ಫೂರ್ತಿಯಾಗಬೇಕು’ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಹಾಗೂ ವಿವಿಧ ವಲಯ ಆಯುಕ್ತರು, ಪಾಲಿಕೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.