ಸಾರಾಂಶ
ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಕೂಡ್ಲೂರ್ ಅನಿಲ್ ಗೌಡ ಒತ್ತಾಯ । ವ್ಯಾಪಾರಿಗಳಿಗೆ ದಿನದ ಲೆಕ್ಕದಲ್ಲಿ ಬಾಡಿಗೆ
ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಮುಖ್ಯ ರಸ್ತೆಯ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡಿ ಸಾರ್ವಜನಿಕರ ಸುಗಮ ಓಡಾಟಕ್ಕೆ ತೊಂದರೆ ಉಂಟು ಮಾಡುತ್ತಿದ್ದ ಗೂಡಂಗಡಿಗಳನ್ನು ತೆರವು ಮಾಡಿಸಿದ ಪುರಸಭೆ ಕೆಲಸ ಶ್ಲಾಘನೀಯ. ಇದರ ಜತೆಗೆ ಕೆಲವು ಬಲಾಡ್ಯರು ತಮ್ಮ ಅಂಗಡಿಗಳ ಮುಂದೆ ಇರುವ ಪುಟ್‌ಪಾತ್ ಜಾಗವನ್ನು ಆಕ್ರಮಿಸಿಕೊಂಡು ವ್ಯಾಪಾರಿಗಳಿಗೆ ದಿನದ ಬಾಡಿಗೆ ನೀಡುತ್ತಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಜಿಲ್ಲಾ ಹಾಗೂ ತಾಲೂಕು ಯುವ ಮೋರ್ಚಾ ಆಗ್ರಹಿಸಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಯುವ ಮೊರ್ಚಾ ಕಾರ್ಯದರ್ಶಿ ಕೂಡ್ಲೂರ್ ಅನಿಲ್ ಗೌಡ, ‘೨ ದಿನಗಳ ಹಿಂದೆ ಪುರಸಭೆ ಪಟ್ಟಣದ ಬೀದಿ ಬದಿಯ ವ್ಯಾಪಾರಿಗಳನ್ನು ಖಾಲಿ ಮಾಡಿಸಿದ್ದಾರೆ. ಅದರಂತೆ ನೆಹರೂ ನಗರದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಕೋಳಿ ಅಂಗಡಿಗಳಿಂದ ತೀವ್ರ ತೊಂದರೆಯಾಗುತ್ತಿದ್ದು ಅವುಗಳ ಬಗ್ಗೆ ಮೊದಲು ಗಮನ ಹರಿಸಿ. ಅಸ್ವಚ್ಛತೆಗೆ ಕಾರಣವಾಗುತ್ತಿರುವ ಅಂಗಡಿಗಳನ್ನು ತೆರವುಗೊಳಿಸಬೇಕು. ಪಟ್ಟಣದ ವ್ಯಾಪ್ತಿಯ ಕೆಲ ಅಂಗಡಿ ವರ್ತಕರು ಪುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡು ವ್ಯಾಪಾರವನ್ನು ಮಾಡುತ್ತಿರುವುದು ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೆ? ಅವರಿಗೆ ನೋಟಿಸ್ ನೀಡಿ ಪಾದಚಾರಿಗಳಿಗೆ ಅನುವು ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.‘ಇತ್ತೀಚಿನ ದಿನಗಳಲ್ಲಿ ಬೇಕಾಬಿಟ್ಟಿಯಾಗಿ ಮಳಿಗೆಗಳ ಹರಾಜು ಮಾಡಿದ್ದು ಕೆಲ ಸದಸ್ಯರು ಹಾಗೂ ಅಧಿಕಾರಿಗಳು ಶಾಮೀಲಾಗಿ ಹರಾಜು ಬಿಡ್ಡುದಾರರಿಗೆ ಮಳಿಗೆಗಳನ್ನು ನೀಡಿಲ್ಲ. ಇದರ ಒಳ ಮರ್ಮವೇನು? ಕೂಡಲೇ ಅವರು ಕಟ್ಟಿರುವ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಮರು ಟೆಂಡರ್ ಮಾಡಬೇಕು. ಅವರು ಹಲವಾರು ವರ್ಷಗಳಿಂದ ಅಲ್ಲೇ ಬೀಡು ಬಿಟ್ಟಿರುವ ಅಂಗಡಿ ಮಳಿಗೆಗಳನ್ನು ಖಾಲಿ ಮಾಡಿಸಬೇಕು. ಈ ಬಗ್ಗೆ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುಮನ್ ನವಿಲಹಳ್ಳಿ ಮಾತನಾಡಿ, ‘ಪಟ್ಟಣದಲ್ಲಿ ಈಗಾಗಲೇ ಪಾರ್ಕಿಂಗ್ ಹಾಗೂ ಸ್ವಚ್ಛತೆಗಾಗಿ ಟಾರ್ಪಲ್ ಕಟ್ಟಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿರುವುದು ಸ್ವಾಗತಾರ್ಹ. ಅದರೆ ವಾರಕ್ಕೊಮ್ಮೆ ನಡೆಯುವಂತಹ ವಾರದ ಸಂತೆಯ ದಿನ ಸುಮಾರು ಸಾವಿರಾರು ವಿದ್ಯಾರ್ಥಿಗಳು ದೇವಾಲಯದ ರಸ್ತೆಯಲ್ಲಿ ಬರುವುದರಿಂದ ರಸ್ತೆಯಲ್ಲಿಯೇ ಪ್ರತಿಯೊಬ್ಬರೂ ಫುಟ್‌ಪಾತ್ ಅಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಾರೆ. ಇದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಕೂಡಲೇ ಪುರಸಭೆಯವರು ಸಂತೆಯ ಒಳಭಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಲಿ’ ಎಂದು ಆಗ್ರಹಿಸಿದರು.‘ಕೇವಲ ಒಂದು ವಾರದ ಗಡುವನ್ನು ಯುವ ಮೊರ್ಚಾ ವತಿಯಿಂದ ನೀಡುತ್ತಿದ್ದು ಸರಿಪಡಿಸದಿದ್ದರೆ ಯುವ ಮೊರ್ಚಾ ವತಿಯಿಂದ ಪ್ರತಿಭಟನೆ ಮಾಡುವುದಲ್ಲದೆ ನಾವೇ ಅವುಗಳನ್ನು ತೆರವುಗೊಳಿಸುವ ಕಾರ್ಯಚರಣೆ ಮಾಡಬೇಕಾಗುತ್ತದೆ. ಈ ಸಮಸ್ಯೆಗಳ ಬಗ್ಗೆ ಶಾಸಕರಿಗೂ ಸಹ ಜಿಲ್ಲಾ ಹಾಗೂ ತಾಲೂಕು ಯುವ ಮೊರ್ಚಾ ವತಿಯಿಂದ ಮನವಿ ಮಾಡಲಾಗುತ್ತದೆ’ ಎಂದರು.