ಅಗತ್ಯ ದಾಖಲೆ ಒದಗಿಸಿದಲ್ಲಿ ಬಿಪಿಎಲ್ ಕಾರ್ಡ್ ಮುಂದುವರಿಕೆ

| Published : Nov 19 2025, 12:15 AM IST

ಅಗತ್ಯ ದಾಖಲೆ ಒದಗಿಸಿದಲ್ಲಿ ಬಿಪಿಎಲ್ ಕಾರ್ಡ್ ಮುಂದುವರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಜಿಲ್ಲೆಯಲ್ಲಿ 15,053 ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಗುರುತಿಸಲಾಗಿದ್ದು, ಇದರಲ್ಲಿರುವ ಅರ್ಹ ಪಡಿತರದಾರರು 45 ದಿನದೊಳಗೆ ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಬಿಪಿಎಲ್ ಕಾರ್ಡ್ ಮುಂದುವರೆಸಲು ಅವಕಾಶ ಇದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು ತಿಳಿಸಿದರು.

ರಾಮನಗರ: ಜಿಲ್ಲೆಯಲ್ಲಿ 15,053 ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಗುರುತಿಸಲಾಗಿದ್ದು, ಇದರಲ್ಲಿರುವ ಅರ್ಹ ಪಡಿತರದಾರರು 45 ದಿನದೊಳಗೆ ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಬಿಪಿಎಲ್ ಕಾರ್ಡ್ ಮುಂದುವರೆಸಲು ಅವಕಾಶ ಇದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು ತಿಳಿಸಿದರು.

ನಗರದ ಜಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಎಪಿಎಲ್ ಚೀಟಿಯನ್ನಾಗಿ ಪರಿವರ್ತಿಸಲಾದ ಪಡಿತರಾದರರು ಬಿಪಿಎಲ್ ಚೀಟಿ ಹೊಂದಲು ಅರ್ಹರಾಗಿದ್ದಲ್ಲಿ 45 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್ ಗಳಿಗೆ ಮನವಿ ಸಲ್ಲಿಸಬಹುದಾಗಿದೆ ಎಂದರು.

ತಹಸೀಲ್ದಾರ್ ಅವರಿಗೆ ಸಲ್ಲಿಕೆಯಾದ ಮನವಿಯನ್ನು ಪರಿಶೀಲಿಸಿ ಬಿಪಿಎಲ್ ಕಾರ್ಡ್ ಹೊಂದಲು ನಿಯಮಾನುಸಾರ ಅರ್ಹರಿದ್ದಲ್ಲಿ ಅಂತಹವರ ಬಿಪಿಎಲ್ ಕಾರ್ಡ್ ಅನ್ನು ಮರು ಸ್ಥಾಪಿಸಲಾಗುತ್ತದೆ. ಹಾಗೊಂದು ವೇಳೆ ಅನರ್ಹರು ಹೊಂದಿರುವ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡ್ ಗಳನ್ನಾಗಿ ಪರಿವರ್ತಿಸಿದ ನಂತರ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಅಂತಹ ಪಡಿತರ ಚೀಟಿಗಳನ್ನು ಎಪಿಎಲ್ ಕಾರ್ಡ್ ಗಳನ್ನಾಗಿ ಮುಂದುವರೆಸಲಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ಎನ್‌ಎಫ್‌ಎಸ್‌ಎ ಮಿತಿಗಿಂತ ಹೆಚ್ಚಿನ ಪಡಿತರ ಫಲಾನುಭವಿಗಳಿದ್ದಾರೆ. ಹೀಗಾಗಿ ಬಿಪಿಎಲ್ ಚೀಟಿಗಳಲ್ಲಿ ಅನರ್ಹರನ್ನು ಮಾನದಂಡಗಳನ್ವಯ ಕೈಬಿಡಲು ಉದ್ದೇಶಿಸಲಾಗಿದೆ. ಈ ಕಾರಣದಿಂದಲೇ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಸದ್ಯಕ್ಕೆ ಜಿಲ್ಲೆಯಲ್ಲಿ 15,053 ಅನುಮಾನಾಸ್ಪದ ಬಿಪಿಎಲ್ ಚೀಟಿಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 6583 ಚೀಟಿಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲಾಗಿದೆ. 845 ಕಾರ್ಡ್ ಗಳನ್ನು ಬಿಪಿಎಲ್ ಆಗಿ ಮರು ಸ್ಥಾಪಿಸಲಾಗಿದ್ದು, 85 ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. 163 ಕಾರ್ಡ್ ಗಳು ಅನುಮಾನಾಸ್ಪದವಾಗಿದ್ದರೆ, 7676 ಚೀಟಿಗಳು ಪರಿಶೀಲನಾ ಹಂತದಲ್ಲಿವೆ ಎಂದು ತಿಳಿಸಿದರು.

ಶಂಕಾಸ್ಪದ ವಿಧಗಳು ?

ಈಗ 15,053 ಚೀಟಿಗಳ ಪೈಕಿ ಸಿಬಿಡಿಟಿ ಆದಾಯ ಗುಂಪಿನ ವಾರ್ಷಿಕ ಆದಾಯ 1 ಲಕ್ಷ 20 ಸಾವಿರಕ್ಕಿಂತ ಹೆಚ್ಚಿರುವ 13,006 ಫಲಾನುಭವಿಗಳು, ಬೇರೆ ರಾಜ್ಯದಲ್ಲಿಯೂ ಪಡಿತರ ಚೀಟಿ ಹೊಂದಿರುವ 196 ಫಲಾನುಭವಿಗಳು, 12 ತಿಂಗಳಿಂದ ಪಡಿತರ ಪಡೆಯದ 738 ಫಲಾನುಭವಿಗಳು, ಪಿಎಂ ಕಿಸಾನ್ ಯೋಜನೆ ಅಡಿ 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ 45 ಫಲಾನುವಿಗಳು, ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವ 554 ಫಲಾನುಭವಿಗಳು ಇದ್ದಾರೆ.

6 ರಿಂದ 12 ತಿಂಗಳವರೆಗೆ ಪಡಿತರ ಪಡೆಯದ 357 ಫಲಾನುಭವಿಗಳು, ಜಿಎಸ್ ಟಿ ಹೊಂದಿರುವ ಒಟ್ಟು 25 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸಿರುವ 83 ಫಲಾನುಭವಿಗಳು, 100 ವರ್ಷ ಮೇಲ್ಪಟ್ಟ 35 ಫಲಾನುಭವಿಗಳು,4 ಮೃತ ವ್ಯಕ್ತಿಗಳು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಕ ಸದಸ್ಯ ಫಲಾನುಭವಿಗಳಾಗಿರುವ 10, ಒಂದಕ್ಕಿಂತ ಹೆಚ್ಚಿನ ಹೆಚ್ಚು ಪಡಿತರ ಚೀಟಿ ಹೊಂದಿರುವ 9 ಹಾಗೂ ಸ್ವಂತ ಬಳಕೆಗಾಗಿ ನಾಲ್ಕು ಚಕ್ರ ವಾಹನ (ವೈಟ್ ಬೋರ್ಡ್) ಹೊಂದಿರುವ 14 ಫಲಾನುಭವಿಗಳ ಚೀಟಿಗಳನ್ನು ಎಪಿಎಲ್ ಚೀಟಿಗಳಾಗಿ ಪರಿವರ್ತಿಸಲು ಗುರುತಿಸಲಾಗಿದೆ ಎಂದು ಕೆ.ರಾಜು ಹೇಳಿದರು.

ಸಭೆಯಲ್ಲಿ ಪ್ರಾಧಿಕಾರ ಉಪಾಧ್ಯಕ್ಷರಾದ ಎಸ್.ಸಿ.ಶೇಖರ್ , ಶಿವಪ್ರಸಾದ್ , ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ಸದಸ್ಯರಾದ ಜಯಣ್ಣ, ಕಾಳಮ್ಮ, ಶೋಭಾ, ವನಜಾಕ್ಷಿ, ಎಂ.ಮಹದೇವು ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್ ................

ನ್ಯಾಯಬೆಲೆ ಅಂಗಡಿಗಳ ಬಳಿ ನೋಟಿಸ್ :

ಅನರ್ಹರ ಬಿಪಿಎಲ್ ಕಾರ್ಡ್ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿಗಳ ಬಳಿ ನೋಟಿಸ್ ಹಾಕಲಾಗಿದೆ. ಗ್ರಾಮದ ವಾಸಿಯಾದ ನೀವು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಪಡಿತರ ಚೀಟಿ ಸಂಖ್ಯೆ, ನಿಮ್ಮ ಪಡಿತರ ಚೀಟಿಯಲ್ಲಿನ ಸದಸ್ಯರಾದ - ಸದರಿಯವರಿಗೆ ಸಂಬಂಧಿಸಿದಂತೆ ಉಲ್ಲೇಖ(3)ರ ವರದಿಯಲ್ಲಿ ಸಿಬಿಡಿಐ ವಾರ್ಷಿಕ ಆದಾಯ 1.20 ಲಕ್ಷ ರುಪಾಯಿ ಗಿಂತ ಹೆಚ್ಚಿದ್ದು ಉಲ್ಲೇಖ(1)ರಂತೆ ನೀವು ಎಎವೈ/ಬಿಪಿಎಲ್ ಪಡಿತರ ಚೀಟಿ ಹೊಂದಲು ಅರ್ಹರಾಗಿರುವುದಿಲ್ಲ. ಈ ಬಗ್ಗೆ, ಪರಿಶೀಲಿಸಿ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಿ/ಎಪಿಎಲ್ ಚೀಟಿಯನ್ನಾಗಿ ಪರಿವರ್ತಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಲ್ಲೇಖ(2)ರಂತೆ ಸೂಚಿಸಲಾಗಿರುತ್ತದೆ ಎಂದು ವಿವರಣೆ ನೀಡಲಾಗಿದೆ.