ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಉತ್ತರದ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನಿಗೆ ಸುಂದರವಾದ ದೇವಸ್ಥಾನ ನಿರ್ಮಾಣಗೊಂಡು ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆಗೊಳ್ಳುವ ಸುಸಂದರ್ಭದಲ್ಲೇ ದಕ್ಷಿಣದಲ್ಲಿರುವ ಬಂಟ್ವಾಳದ ತಾಲೂಕಿನ ಫರಂಗಿಪೇಟೆಯಲ್ಲಿ ಶ್ರೀರಾಮ ಧೂತ ಹನುಮನಿಗೂ ಸುಂದರವಾದ ಶಿಲಾಮಯ ದೇವಸ್ಥಾನ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ದೇವಸ್ಥಾನ ನಿರ್ಮಾಣದ ಅಂತಿಮ ಹಂತದ ಕೆಲಸಗಳು ಭರದಿಂದ ನಡೆಯುತ್ತಿದ್ದು, ಜ.21ರಿಂದ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಜಿಲ್ಲೆಯ ಜೀವನದಿ ನೇತ್ರಾವದಿಯ ದಂಡೆಯಲ್ಲಿರುವ ಪುದು ಗ್ರಾಮದ ಫರಂಗಿಪೇಟೆ ಬೆಳೆಯುತ್ತಿರುವ ಸಣ್ಣ ಪಟ್ಟಣ. ಇಲ್ಲಿನ ವಿಜಯನಗರದಲ್ಲಿ ಸುಮಾರು 40 ವರ್ಷಗಳ ಹಿಂದೆ ಊರಿನ ಯುವಕರು ವ್ಯಾಯಾಮ, ತಾಲೀಮು, ಕುಸ್ತಿ ಮೊದಲಾದ ಅಂಗ ಸಾಧನೆಗಾಗಿ ಮುಳಿಹುಲ್ಲಿನ ಜೋಪಡಿಯಲ್ಲಿ ಓಂ ಶ್ರೀ ವೀರಾಂಜನೇಯ ಎನ್ನುವ ವ್ಯಾಯಾಮ ಶಾಲೆಯನ್ನು ಆರಂಭಿಸಿದರು. ಕ್ರಮೇಣ ಮುಳಿಹುಲ್ಲಿನ ವ್ಯಾಯಾಮ ಶಾಲೆ ಸುಸಜ್ಜಿತ ಕಟ್ಟಡವಾಗಿ ಮಾರ್ಪಡುಗೊಂಡು ಶ್ರೀ ಆಂಜನೇಯ ಸ್ವಾಮಿಯ ಶಿಲಾಮೂರ್ತಿ ಪ್ರತಿಷ್ಠಾಪನೆಗೊಂಡಿತು. ನಿತ್ಯ ಪೂಜೆ, ಪುನಸ್ಕಾರಗಳಿಂದ ವ್ಯಾಯಮಶಾಲೆ ಶ್ರದ್ಧಾ ಕೇಂದ್ರವಾಗಿ ಬೆಳೆಯುತ್ತಾ ಭಕ್ತ ಜನಾಕರ್ಷಣೆಯನ್ನು ಪಡೆಯಲಾರಂಭಿಸಿತು. ಪ್ರಶ್ನಾಚಿಂತನೆಯಲ್ಲಿ ಈ ಸ್ಥಳದಲ್ಲಿ ಶ್ರೀ ಆಂಜನೇಯನಿಗೆ ದೇವಸ್ಥಾನ ನಿರ್ಮಿಸಬೇಕೆಂದು ಗೋಚರವಾಯಿತು.ಸುಸಜ್ಜಿತ ದೇವಸ್ಥಾನ ನಿರ್ಮಾಣ:ದೇವಸ್ಥಾನ ನಿರ್ಮಾಣಗೊಳ್ಳಬೇಕೆನ್ನುವ ಸೂಚನೆ ಸಿಕ್ಕ ತಕ್ಷಣವೇ ಶ್ರೀ ಆಂಜನೇಯ ನಿರ್ಮಾಣ ಸಮಿತಿ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಕಾಯೋನ್ಮುಖವಾಗಿ 25 ಸೆಂಟ್ಸ್ ಜಾಗವನ್ನು ದಾನ ಪಡೆದು, 2.56 ಎಕರೆ ಜಾಗವನ್ನು ಖರೀದಿಸಿ, ಒಟ್ಟು 2.81 ಎಕರೆ ವಿಶಾಲವಾದ ಪ್ರದೇಶದಲ್ಲಿ ಶಿಲಾಮಯ ದೇವಸ್ಥಾನ ನಿರ್ಮಾಣಗೊಳ್ಳುತ್ತಿದೆ. ತೀರ್ಥಮಂಟಪ, ತೀರ್ಥಬಾವಿ, ಸುತ್ತುಪೌಳಿ, ಪಾಕಶಾಲೆ, ಅರ್ಚಕರ ವಸತಿ, ಸಭಾಂಗಣ, ಗೋಶಾಲೆ ಮತ್ತು ತಮಿಳುನಾಡು ಶೈಲಿಯ ರಾಜಗೋಪುರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈವರೆಗೆ ಸುಮಾರು 7.5 ಕೋಟಿ ರು. ವೆಚ್ಚತಗಲಿದೆ. ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತರ ನೇತೃತ್ವದಲ್ಲಿ ಆಗಮೋಕ್ತ ರೀತಿಯಲ್ಲಿ ದೇವಸ್ಥಾನ ನಿರ್ಮಾಣಗೊಳ್ಳುತ್ತಿದ್ದು, ಜ.21ರಿಂದ 26ರ ವರೆಗೆ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಪ್ರಾಣ ಪ್ರತಿಷ್ಠೆ ನಡೆಯುವ ಸಂದರ್ಭವೇ ಶ್ರೀ ರಾಮ ಬಂಟನಿಗೆ ಫರಂಗಿಪೇಟೆ ವಿಜಯನಗರದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳುತ್ತಿರುವುದು ಇಲ್ಲಿನ ಜನರ ಸೌಭಾಗ್ಯ. ಅಲ್ಲಿ ಶ್ರೀರಾಮ ದೇವರ ಪ್ರತಿಷ್ಠೆಯ ದಿನದಂದು ಬೆಳಗ್ಗೆ 11.30ರಿಂದ 12.30ರ ವರೆಗೆ ಶ್ರೀ ರಾಮನಾಮ ತಾರಕ ಮಂತ್ರ ಜಪ ಮತ್ತು ಹನುಮಾನ್ ಚಾಲೀಸ ಪಠಣ ನಡೆಯಲಿದೆ. ಅಲ್ಲಿ ರಾಮ ಇಲ್ಲಿ ಹನುಮ ಎನ್ನುವುದನ್ನು ಇಲ್ಲಿನ ಪ್ರತಿಯೊಬ್ಬರೂ ಮಂತ್ರವಾಗಿಸಿದ್ದಾರೆ.