ಕೈನಡು ಕರಿಯಮ್ಮ ದೇವಿಯ ಬ್ರಹ್ಮರಥೋತ್ಸವ

| Published : May 03 2024, 01:02 AM IST

ಸಾರಾಂಶ

ಶ್ರೀರಾಂಫುರ ಹೋಬಳಿ ಕೈನಡು ಗ್ರಾಮದ ಶ್ರೀ ಕರಿಯಮ್ಮ ದೇವಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

ಹೊಸದುರ್ಗ: ತಾಲೂಕಿನ ಶ್ರೀರಾಂಫುರ ಹೋಬಳಿ ಕೈನಡು ಗ್ರಾಮದ ಶ್ರೀ ಕರಿಯಮ್ಮ ದೇವಿ ಬ್ರಹ್ಮರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆ ದೇವಿಗೆ ವಿಶೇಷ ಪೂಜೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಮಧ್ಯಾಹ್ನ ವಿಶೇಷವಾಗಿ ಹೂಗಳಿಂದ ಅಲಂಕೃತವಾಗಿದ್ದ ರಥಕ್ಕೆ ಕಳಶಾರೋಹಣ ಮಾಡಿದ ನಂತರ ಕರಿಯಮ್ಮ ದೇವಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥ ಎಳೆಯಲಾಯಿತು. ಸೋಮಸಂದ್ರ, ಚಿಕ್ಕತಿಮ್ಮಯ್ಯನಪಾಳ್ಯ, ತುಂಬಿನಕೆರೆ, ಕಾವಲಾರಮನೆ, ತೊಣಚೇನಹಳ್ಳಿ, ಮೆಂಗಸಂದ್ರ ಸೇರಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥಕ್ಕೆ ಬಾಳೆಹಣ್ಣು ತೂರುವುದರ ಮೂಲಕ ಭಕ್ತಿ ಸಮರ್ಪಿಸಿದರು. ನಂತರ ಪಾನಕ ಗಾಡಿ ಉತ್ಸವ, ಹಾಗೂ ಸಮಸ್ತ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಧ್ವಜಾರೋಹಣ ಹಾಗೂ ಸೋಮಸಂದ್ರ ಗ್ರಾಮದಲ್ಲಿ ದೇವಿಗೆ ಮದುವಣಗಿತ್ತಿ ಶಾಸ್ತ್ರದೊಂದಿಗೆ ಆರಂಭವಾದ ಕಾರ್ಯಕ್ರಮವು ಬೇವಿನ ಸೀರೆ, ಉರುಳು ಸೇವೆ, ಆರುಹಳ್ಳಿ ಎಡೆಬಾನ ನೆಡೆಯಿತು. ಸೋಮಸಂದ್ರ ಗ್ರಾಮದ ಆಂಜನೇಸ್ವಾಮಿಯ ಆಗಮನ ಹಾಗೂ ಕೂಡುಭೇಟಿ, ಚಂದ್ರಮಂಡಲೋತ್ಸವ ನೆರವೇರಿತು.

ಶುಕ್ರವಾರ ಬೆಳಗ್ಗೆ ಅಗ್ನಿಕುಂಡದ ಸೇವೆ, ನಂತರ ಮಧ್ಯಾಹ್ನ ಓಕಳಿ ಮಹೋತ್ಸವದೊಂದಿಗೆ ಜಾತ್ರೆಗೆ ತೆರೆ ಎಳೆಯಲಾಗುವುದು.