ವಡ್ಡಗೆರೆ ಕೆರೆಗೆ ಟ್ರಯಲ್‌ ರನ್‌ ನೀರು ಬಂತು!

| Published : May 03 2024, 01:01 AM IST

ಸಾರಾಂಶ

ತಾಲೂಕಿನ ವಡ್ಡಗೆರೆ ಕೆರೆಗೆ ನೀರು ತುಂಬಿಸೋದು ಯಾವಾಗ ಎಂದು ಕಳೆದ ಮಾ.೩೦ ಕನ್ನಡಪ್ರಭ ವರದಿ ಪ್ರಕಟವಾದ ತಿಂಗಳ ಬಳಿಕ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಕಾವೇರಿ ನೀರಾವರಿ ನಿಗಮ ಟ್ರಯಲ್‌ ರನ್‌ ನೀರು ಗುರುವಾರ ಹರಿಸಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ತುಂಬಿಸೋದು ಯಾವಾಗ ಎಂದು ಕಳೆದ ಮಾ.೩೦ ಕನ್ನಡಪ್ರಭ ವರದಿ ಪ್ರಕಟವಾದ ತಿಂಗಳ ಬಳಿಕ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಕಾವೇರಿ ನೀರಾವರಿ ನಿಗಮ ಟ್ರಯಲ್‌ ರನ್‌ ನೀರು ಗುರುವಾರ ಹರಿಸಿದೆ.ಮೇ ೨ರ ಗುರುವಾರ ಬೆಳಗ್ಗೆ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಪಾಟೀಲ್‌, ಕಿರಿಯ ಅಭಿಯಂತರ ಮಹೇಶ್‌ ಹುತ್ತೂರು ಪಂಪ್‌ ಹೌಸ್‌ಗೆ ತೆರಳಿ ನೀರೆತ್ತುವ ಯಂತ್ರ ಪರಿಶೀಲನೆಗಾಗಿ ಪ್ರಾಯೋಗಿಕವಾಗಿ ಕೆಲ ಹೊತ್ತು ನೀರು ಹರಿಸಿದ್ದಾರೆ.

ಗ್ಯಾರಂಟಿ ಇಲ್ಲ: ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಆದರೆ ಇದು ಗ್ಯಾರಂಟಿ ಇಲ್ಲ; ಜಿಲ್ಲಾಡಳಿತ ಸೂಚನೆ ಬರುವ ತನಕ ನೀರು ಹರಿಸಲು ಆಗುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿ ಹೇಳಿದ್ದಾರೆ.

ಹಿನ್ನೆಲೆ ಹೀಗಿದೆ?:

2021 ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್‌ ಹಾಗೂ ಶಾಸಕರ ಸಮ್ಮುಖದಲ್ಲಿ ತಾಲೂಕಿನ ಹುತ್ತೂರು ಕೆರೆಯಿಂದ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕಿನ ಕೆರೆಗಳಿಗೆ ಒಂದೊಂದು ವರ್ಷ ನೀರು ಬಿಡುವುದು ಎಂದು ಒಪ್ಪಂದ ಆಗಿದೆ. ಕಳೆದ ಸಾಲಿನಲ್ಲಿ ಚಾಮರಾಜನಗರ ತಾಲೂಕಿನ ಕೆರೆಗಳಿಗೆ ಹುತ್ತೂರು ಕೆರೆಯಿಂದ ನೀರು ಹರಿಸಲಾಗುತ್ತಿದ್ದು ಚಾಮರಾಜನಗರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದೇ ಕಷ್ಟ ಎನ್ನಲಾಗುತ್ತಿದೆ. ಆದರೆ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ತುಂಬಿಸಬೇಕು ಎಂದು ರೈತರು ಹಾಗೂ ರೈತಸಂಘಟನೆಗಳ ಆಗ್ರಹ ಹೆಚ್ಚಾಗುತ್ತಿದೆ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಶಾಸಕರು ಮಾತುಕತೆ ನಡೆಸಿ ಬರಡಾದ ವಡ್ಡಗೆರೆ ಕೆರೆಗೆ ನೀರು ತುಂಬಿಸಲಿ ಎಂಬುದು ರೈತರು ಆಗ್ರಹ.

ಚಾಮರಾಜನಗರ ತಾಲೂಕಿನ ರೈತರು ನೀರು ಬಿಡಬೇಕು ಎಂದು ಶಾಸಕರು ವಾದಿಸುತ್ತಿದ್ದರೆ, ತಾಲೂಕಿನ ರೈತರು ವಡ್ಡಗೆರೆ ಕೆರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸುತ್ತಿರುವುದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಪೀಕಲಾಟ ಶುರುವಾಗಿದೆ.

ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಟ್ರಯಲ್‌ ರನ್‌ ಮಾಡಿರುವುದು ರೈತರಲ್ಲಿ ಸಂತಸ ತಂದಿದೆ ಆದರೆ ಇದು ಕೇವಲ ಟ್ರಯಲ್‌ ರನ್‌ ! ಇನ್ನೂ ಅಧಿಕೃತವಾಗಿ ಹುತ್ತೂರು ಕೆರೆಯಿಂದ ವಡ್ಡಗೆರೆಗೆ ನೀರು ಹರಿಸಲು ಆದೇಶ ಹೊರ ಬಿದ್ದಿಲ್ಲ!

ಗುರುವಾರ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಟ್ರಯಲ್‌ ರನ್‌ ಮಾಡಿದ್ದಾರೆ ಅಷ್ಟೆ. ಶಾಸಕರಾದ ಪುಟ್ಟರಂಗಶೆಟ್ಟಿ ಬಾಗಲಕೋಟೆ ಚುನಾವಣಾ ಪ್ರಚಾರದಲ್ಲಿದ್ದಾರೆ. ಗುರುವಾರ ಸಂಜೆ ಮತ್ತೆ ಮಾತನಾಡಿ ವಡ್ಡಗೆರೆ ಕೆರೆಗೆ ಅವಕಾಶ ಕೊಡಿ ಎಂದು ಕೇಳುವೆ.

-ಎಚ್.ಎಂ.ಗಣೇಶ್‌ ಪ್ರಸಾದ್‌,

ಹುತ್ತೂರು ಕೆರೆ ಯಂತ್ರ ಯಾವ ಸ್ಥಿತಿಯಲ್ಲಿವೆ ಎಂದು ತಿಳಿದುಕೊಳ್ಳಲು ಗುರುವಾರ ಟ್ರಯಲ್‌ ರನ್‌ ಮಾಡಲಾಗಿದೆ. ಒಂದು ಯಂತ್ರದಿಂದ ಮತ್ತೊಂದು ಯಂತ್ರದಿಂದ ನೀರು ಎತ್ತಿಸುವ ಕೆಲಸ ಮಾಡಲಾಗುತ್ತಿದೆ.

-ಮಹೇಶ್‌, ಕಿರಿಯ ಅಭಿಯಂತರ