ಬ್ರಹ್ಮಾವರ ಜಿಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಮಕ್ಕಳಿಗೆ ವ್ಯಾಪಾರ ಮತ್ತು ವಹಿವಾಟಿನ ಅನುಭವ ನೀಡುವ ಉದ್ದೇಶದಿಂದ ಚಿಣ್ಣರ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು.

ಬ್ರಹ್ಮಾವರ: ಇಲ್ಲಿನ ಜಿಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಮಕ್ಕಳಿಗೆ ವ್ಯಾಪಾರ ಮತ್ತು ವಹಿವಾಟಿನ ಅನುಭವ ನೀಡುವ ಉದ್ದೇಶದಿಂದ ಚಿಣ್ಣರ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಆಡಳಿತ ಮಂಡಳಿ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ವ್ಯವಹಾರದಲ್ಲಿ ಮೋಸ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮಕ್ಕಳಿಗೆ ಕೊಡು-ಕೊಳ್ಳುವುದರ ಪರಿಜ್ಞಾನವಿರಬೇಕು. ಆ ನಿಟ್ಟಿನಲ್ಲಿ ಮಕ್ಕಳು ಎಳೆಯ ವಯಸ್ಸಿನಲ್ಲೇ ವ್ಯಾವಹಾರಿಕ ಜ್ಞಾನ ಮೈಗೂಡಿಸಿಕೊಳ್ಳುವಂತೆ ಪೋಷಕರು ಮುತುವರ್ಜಿ ವಹಿಸಬೇಕು ಎಂದರು.ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್‌ ಮಾತನಾಡಿ, ಹಣವು ದಿನನಿತ್ಯದ ಜೀವನಕ್ಕೆ ಅಗತ್ಯ, ಮಕ್ಕಳಿಗೆ ಹಣ ಸಂಪಾದನೆಯ ಜತೆಗೆ ಅದನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸುವ ಅರಿವಿರಬೇಕು. ಅದೇ ರೀತಿ ವ್ಯವಹಾರಕ್ಕೆ ಕೌಶಲ್ಯತೆ ಮತ್ತು ಉತ್ತಮ ಸೇವೆ ಅತ್ಯಗತ್ಯ. ಗ್ರಾಹಕರು ಸಂತೃಪ್ತಿಯಿಂದ ವ್ಯಾಪಾರ ಮಾಡಿದಾಗ ವ್ಯವಹಾರದಲ್ಲಿ ಯಶಸ್ಸನ್ನು ಕಾಣಬಹುದು ಎಂದರು.

ಶಾಲೆಯ ಪ್ರಿ ನರ್ಸರಿ, ಎಲ್ ಕೆಜಿ, ಯುಕೆಜಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಸ್ತುಗಳ ಪ್ರದರ್ಶನ ಮಾಡಿದರು ಮತ್ತು ತಮ್ಮ ಪೋಷಕರ ಜತೆ ಹಣ ನೀಡಿ ವಸ್ತುಗಳನ್ನು ಖರೀದಿಸಿ ಸಂತೆಯ ಪ್ರಾತ್ಯಕ್ಷಿಕ ಅನುಭವ ಪಡೆದುಕೊಂಡರು. ಕಾರ್‍ಯಕ್ರಮದಲ್ಲಿ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.