ವೋಟ್ ಚೋರಿ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಶನಿವಾರ ಉಡುಪಿಯಿಂದ ಮಣಿಪಾಲದವರೆಗೆ 4 ಕಿಮಿ ಮಾನವ ಸರಪಣಿ ರಚಿಸಿ ಪ್ರತಿಭಟನೆ ನಡೆಸಿತು.

ಉಡುಪಿ: ಕೇಂದ್ರ ಬಿಜೆಪಿ ಸರ್ಕಾರದ ವೋಟ್ ಚೋರಿ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಶನಿವಾರ ಉಡುಪಿಯಿಂದ ಮಣಿಪಾಲದವರೆಗೆ 4 ಕಿಮಿ ಮಾನವ ಸರಪಣಿ ರಚಿಸಿ ಪ್ರತಿಭಟನೆ ನಡೆಸಿತು.

ಈ ಸಂದರ್ಭ ವೋಟ್ ಚೋರಿ ವಿರುದ್ಧ ಕಳೆದೊಂದು ತಿಂಗಳಿಂದ ನಡೆಸಿದ 1.30 ಲಕ್ಷ ಸಹಿ ಸಂಗ್ರಹವನ್ನು ಪ್ರದರ್ಶಿಸಲಾಯಿತು. ಈ ಸಂದರ್ಭ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ನಾಯಕ ನಿಕೇತ್‌ರಾಜ್ ಮೌರ್ಯ ಅವರು, ಈ ದೇಶದ ತಳ ಸಮುದಾಯದ ಜನರಿಗೆ ಶಿಕ್ಷಣ ಮತ್ತು ದೇವಾಲಯಗಳ ಪ್ರವೇಶದ ಹಕ್ಕನ್ನುನೀಡಿದ್ದು, ಸಂವಿಧಾನ. ಆದರೆ ಬಿಜೆಪಿ ಸಂವಿಧಾನವನ್ನು ಬದಲಾಯಿಸಿ, ಮನುಸ್ಮೃತಿಯನ್ನು ಜಾರಿಗೊಳಿಸಿ, ಜನರ ಈ ಹಕ್ಕುಗಳನ್ನು ಕಸಿಯುವುದಕ್ಕೆ ಹೊರಟಿದೆ ಎಂದು ಆರೋಪಿಸಿದರು.

ದೇಶ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು, ಸಂವಿಧಾನ ಉಳಿಯಬೇಕಾದರೆ ಪ್ರಜಾಪ್ರಭುತ್ವ ಉಳಿಯಬೇಕು, ಪ್ರಜಾಪ್ರಭುತ್ವ ಉಳಿಯಬೇಕಾದರೆ ನ್ಯಾಯಯುತ ಚುನಾವಣೆಗಳು ನಡೆಯಬೇಕು, ಆದರೆ ಬಿಜೆಪಿಗೆ ಈ ಮೂರು ಬೇಕಾಗಿಲ್ಲ. ಪೊಲೀಸರು ಪಿಕ್‌ಪಾಕೇಟ್ ಮಾಡುವ ಕಳ್ಳರನ್ನು ಹಿಡಿದು ಶಿಕ್ಷೆ ನೀಡುತ್ತಾರೆ, ಆದರೆ ಮತಗಳನ್ನು ಕಳ್ಳತನ ಮಾಡುವ ಬಿಜೆಪಿಗೆ ದೇಶದ ಜನರೇ ಶಿಕ್ಷೆ ನೀಡಬೇಕು ಎಂದವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಅಂದು ಆರ್‌ಎಸ್‌ಎಸ್‌ನ ನಾಥೂರಾಮ್ ಗೋಡ್ಸೆ ಮಹತ್ಮಾ ಗಾಂಧಿಯನ್ನು ಕೊಂದ, ಇಂದು ಬಿಜೆಪಿಯವರು ನರೇಗಾ ಯೋಜನೆಯಲ್ಲಿ ಮಹಾತ್ಮಾಗಾಂಧಿ ಹೆಸರನ್ನು ತೆಗೆದು ಪುನಃ ಅವರನ್ನು ಕೊಲೆ ಮಾಡಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ವಿಶ್ವದ 186 ದೇಶಗಳಲ್ಲಿ ಗಾಂಧೀಜಿಯ ಕುರುಹುಗಳಿವೆ. ಅಂತಹ ಗಾಂಧೀಜಿಯ ಹೆಸರನ್ನು ಅಳಿಸಿ, ರಾಮ ಹೆಸರಿನಲ್ಲಿ ಅಕ್ರಮ ಮಾಡುವುದಕ್ಕೆ ಹೊರಟಿದೆ ಎಂದರು.ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಬಿಜೆಪಿ ಕಸಿಯುತ್ತಿದೆ, ಸಂವಿಧಾನವನ್ನು ರಕ್ಷಿಸುವ ಏಕೈಕ ಪಕ್ಷ ಕಾಂಗ್ರೆಸ್, ಇದಕ್ಕೆ ಯಾವ ತ್ಯಾಗಕ್ಕೂ ಕಾಂಗ್ರೆಸ್ ಸಿದ್ಧ ಎಂದರು.ಕರಾವಳಿ ಪ್ರಾಧಿಕಾರ ಅಧ್ಯಕ್ಷ ಎಂ.ಎ. ಗಪೂರ್ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ಸೋನಿಯಾ, ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ, ಚಿಂತಕ ಪ್ರೊ. ಕೆ. ಫಣಿರಾಜ್, ಜಿಲ್ಲಾ ಕಾಂಗ್ರೆಸ್ ಕಾರ್‍ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುಖಂಡರಾದ ರಾಜು ಪೂಜಾರಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ ಮೊಳವಳ್ಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜ್ಯೋತಿ ಹೆಬ್ಬಾರ್, ಕಾರ್‍ಯಕ್ರಮದ ಸಂಯೋಜಕರಾದ ಹರಿಪ್ರಸಾದ್ ರೈ, ಬ್ಲಾಕ್ ಅಧ್ಯಕ್ಷರಾದ ರಮೇಶ್ ಕಾಂಚನ್ ಮುಂತಾದವರಿದ್ದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಸ್ವಾಗತಿಸಿದರು. ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ ರಾವ್ ಕಿದಿಯೂರು ವಂದಿಸಿದರು.