ಬ್ರಹ್ಮಾವರ: ಸ್ಥಗಿತಗೊಂಡಿದ್ದ ಕೃಷಿ ಡಿಪ್ಲೋಮಾ ಪುನಾರಂಭಕ್ಕೆ ಸರ್ಕಾರ ಆದೇಶ

| Published : Jul 16 2024, 12:37 AM IST

ಬ್ರಹ್ಮಾವರ: ಸ್ಥಗಿತಗೊಂಡಿದ್ದ ಕೃಷಿ ಡಿಪ್ಲೋಮಾ ಪುನಾರಂಭಕ್ಕೆ ಸರ್ಕಾರ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಡಿಪ್ಲೋಮಾ ಕೋರ್ಸ್ ಆರಂಭಿಸಲು ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಎಸ್‌.ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಚಲುವರಾಯ ಸ್ವಾಮಿ ಅವರಿಗೆ ಕೆ.ಜಯಪ್ರಕಾಶ್ ಹೆಗ್ಡೆ ಕೃತಜ್ಞತೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಜಿಲ್ಲೆಯ ರೈತ ಹಾಗೂ ಸಾಮಾಜಿಕ ಸಂಘಟನೆಗಳ ಬಹು ದಿನಗಳ ಬೇಡಿಕೆಯಾದ ಬ್ರಹ್ಮಾವರ ಕೃಷಿ ಸಂಶೋಧನ ಕೇಂದ್ರದಲ್ಲಿ 2024-25ನೇ ಸಾಲಿನಿಂದ ಎರಡು ವರ್ಷಗಳ ಕೃಷಿ ಡಿಪ್ಲೋಮಾ ಕೋರ್ಸ್ ಆರಂಭಿಸಲು ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್‌ ಹೆಗ್ಡೆ ತಿಳಿಸಿದ್ದಾರೆ.

ರಾಜ್ಯ ಕೃಷಿ ಇಲಾಖೆಯ ಅಧೀನ ಕಾರ್ಯದರ್ಶಿ ಇಂದ್ರ ಎಂ. ಅವರು ಹೊರಡಿಸಿರುವ ಸರ್ಕಾರಿ ಆದೇಶದಲ್ಲಿ, ಇಲಾಖೆಯ 33ನೇ ಸಮನ್ವಯ ಸಮಿತಿ ಹಾಗೂ 7ನೇ ಪರಿಣಿತ ಸಮಿತಿ ಸಭೆಯ ತೀರ್ಮಾನದಂತೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಡಿಯಲ್ಲಿ ಬ್ರಹ್ಮಾವರದ ಕೃಷಿ ಸಂಶೋಧನ ಕೇಂದ್ರದಲ್ಲಿ ಲಭ್ಯವಿರುವ ಕಟ್ಟಡ, ಮೂಲ ಸೌಕರ್ಯ ಹಾಗೂ ಬೋಧನಾ ಸಿಬ್ಬಂದಿಯನ್ನು ಬಳಸಿಕೊಂಡು, ಸರ್ಕಾರಕ್ಕೆ ಹೆಚ್ಚುವರಿ ಅನುದಾನಕ್ಕೆ ಪ್ರಾಸ್ತಾಪನೆ ಸಲ್ಲಿಸದಂತೆ ಷರತ್ತು ವಿಧಿಸಿ, 2024-25 ನೇ ಸಾಲಿನಿಂದಲೇ ಎರಡು ವರ್ಷಗಳ ಕೃಷಿ ಡಿಪ್ಲೋಮಾ ಕೋರ್ಸ್ ಆರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಜಿಲ್ಲೆಯ ಜನತೆಯ ಬೇಡಿಕೆಗೆ ಸ್ಪಂದಿಸಿ ಕೃಷಿ ಡಿಪ್ಲೋಮಾ ಕೋರ್ಸ್ ಆರಂಭಿಸಲು ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಎಸ್‌.ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಚಲುವರಾಯ ಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಕೆ.ಜಯಪ್ರಕಾಶ್ ಹೆಗ್ಡೆ, ಬ್ರಹ್ಮಾವರದಲ್ಲಿ ಕೃಷಿ ಅಥವಾ ತೋಟಗಾರಿಕಾ ಪದವಿ ಕಾಲೇಜು ಸ್ವಾಪನೆ ವರೆಗೂ ಪ್ರಯತ್ನ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

----------ಜಯಪ್ರಕಾಶ್ ಹೆಗ್ಡೆ ವಿಶೇಷ ಪ್ರಯತ್ನದ ಫಲ

ಬ್ರಹ್ಮಾವರದ ಕೃಷಿ ಕೇಂದ್ರದಲ್ಲಿ ಕೃಷಿ ಅಥವಾ ತೋಟಗಾರಿಕಾ ಪದವಿ ಕಾಲೇಜು ಹಾಗೂ ಡಿಪ್ಲೋಮಾ ಕೋರ್ಸ್ ಆರಂಭಸುವಂತೆ ಜಿಲ್ಲಾದ್ಯಂತ ಆಗ್ರಹಪೂರ್ವಕ ಬೇಡಿಕೆ ಬಂದ ಹಿನ್ನೆಲೆಯಲ್ಲಿ, ಬ್ರಹ್ಮಾವರ ಸಮೀಪದ ಚೇರ್ಕಾಡಿಯಲ್ಲಿ ನಡೆದಿದ್ದ ಕೃಷಿ ಮೇಳಕ್ಕೆ ರಾಜ್ಯ ಕೃಷಿ ಸಚಿವ ಚಲುವರಾಯ ಸ್ವಾಮಿ ಅವರನ್ನು ಆಮಂತ್ರಿಸಲಾಗಿತ್ತು. ಈ ಸಂದರ್ಭ ಕೃಷಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೇಡಿಕೆಯ ಕುರಿತು ಅವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಅಂದೇ ಮನವಿಗೆ ಸ್ವಂದಿಸಿದ್ದ ಸಚಿವರು, ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದರು.