ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಬ್ರಾಹ್ಮಣ ಸಮುದಾಯ ನಿರಂತರ ದಾಳಿ, ದಬ್ಬಾಳಿಕೆಯ ನಡುವೆಯೂ ತನ್ನ ತನವನ್ನು ಇಂದಿಗೂ ಉಳಿಸಿಕೊಂಡಿದೆ. ಜನಿವಾರವೇ ಬ್ರಾಹ್ಮಣರ ಸಂಸ್ಕಾರ. ಸಿಇಟಿ ಪರೀಕ್ಷೆ ವೇಳೆ ಅಧಿಕಾರಿಗಳು ಜನಿವಾರ ತೆಗೆಸಿ ಮಕ್ಕಳ ಜೀವನದ ಜತೆಗೆ ಆಡಿರುವ ಆಟ, ದೇಶದ ಭವಿಷ್ಯದ ಜತೆಗೆ ಆಡಿರುವ ಆಟ. ನಮ್ಮ ತಾಳ್ಮೆಯನ್ನು ಅಸಹಾಯಕತೆ ಎಂದು ತಿಳಿದುಕೊಳ್ಳುವುದು ಬೇಡ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಪ್ರತಿನಿಧಿ ಮಹೇಶ್ ಕಜೆ ಎಚ್ಚರಿಕೆ ನೀಡಿದರು.ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಚಾರ ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ವಿವಿಧ ವಿಪ್ರ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ನಗರದ ಮಿನಿವಿಧಾನ ಸೌಧದ ಬಳಿ ‘ಬ್ರಹ್ಮತೇಜೋ ಬಲ’ ಹೆಸರಿನಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ ಬಳಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸರ್ಕಾರ ಆಗಿರುವ ತಪ್ಪನ್ನು ತಿದ್ದಿಕೊಂಡು ಮುಂದಕ್ಕೆ ಇಂತಹ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಅವರು ಹೇಳಿದರು.
ತಕ್ಕ ಉತ್ತರ ನೀಡಲೂ ತಿಳಿದಿದೆ: ಶಾಸಕಪ್ರತಿಭಟನೆಯಲ್ಲಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಸರ್ಕಾರ ಮೊದಲು ಹಿಂದೂ ಪದ್ಧತಿ ಅನುಷ್ಠಾನಗಳ ಬಗ್ಗೆ ತಿಳಿದುಕೊಳ್ಳಬೇಕು. ಈಗಾಗಲೇ ಹಲವು ವಿಧದಲ್ಲಿ ಸರ್ಕಾರ ಹಿಂದೂ ಸಮಾಜದ ಮೇಲೆ ಅನ್ಯಾಯ ಎಸಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಾದರೂ ಆದೇಶಗಳನ್ನು ಹೊರಡಿಸುವಾಗ ಸೂಕ್ತ ಎಚ್ಚರಿಕೆ ವಹಿಸಬೇಕು. ಬ್ರಾಹ್ಮಣ ಸಮುದಾಯಕ್ಕೆ ಆಶೀರ್ವಾದ ಮಾಡಲೂ ಗೊತ್ತಿದೆ, ತಕ್ಕ ಉತ್ತರ ನೀಡಲೂ ತಿಳಿದಿದೆ ಎಂದು ಹೇಳಿದರು.
ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ, ಸಮಾಜದ ಏಳಿಗೆಗಾಗಿ ಶ್ರಮಿಸುವ ವರ್ಗ ಬ್ರಾಹ್ಮಣ ಸಮುದಾಯ. ಜನಿವಾರ ತೆಗೆಯುವುದೆಂದರೆ ಅದು ಜೀವನವನ್ನೇ ಹಾಳು ಮಾಡಿದಂತೆ. ಉನ್ನತ ಶಿಕ್ಷಣದ ಆಕಾಂಕ್ಷೆಯಲ್ಲಿದ್ದ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸುವ ಮೂಲಕ ಅವರ ಶಿಕ್ಷಣಕ್ಕೆ ಅಡ್ಡಿ ಪಡಿಸಿರುವುದು ಖಂಡನೀಯ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.ಕಟೀಲಿನ ಕಮಲಾ ದೇವಿಪ್ರಸಾದ ಆಸ್ರಣ್ಣ, ಶರವು ದೇವಳದ ಶಿಲೆಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಮಖರಾದ ಪ್ರೊ. ಎಂ.ಬಿ.ಪುರಾಣಿಕ್, ಪಿ.ಎಸ್.ಪ್ರಕಾಶ್, ಹರಿಕೃಷ್ಣ ಪುನರೂರು, ಶ್ರೀಪತಿ ಭಟ್ ಮೂಡುಬಿದಿರೆ, ಟಿ.ಜಿ.ರಾಜಾರಾಮ ಭಟ್, ಸುಮಂಗಲಾ ರಾವ್, ಪ್ರದೀಪ ಕುಮಾರ ಕಲ್ಕೂರ ಮತ್ತಿತರರಿದ್ದರು.ಸ್ಥಳಕ್ಕೆ ಆಗಮಿಸಿದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಅವರು ಪ್ರತಿಭಟನಕಾರರ ಮನವಿ ಸ್ವೀಕರಿಸಿದರು. ಜಿಲ್ಲಾ ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ನಿರೂಪಿಸಿದರು.
ಪ್ರತಿಭಟನೆಗೂ ಮುನ್ನ ಶರವು ಮಹಾಗಣಪತಿ ದೇವಸ್ಥಾನದ ಆವರಣದಿಂದ ಮಿನಿ ವಿಧಾನಸೌಧದ ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಬ್ರಾಹ್ಮಣ ಸಮಾಜದ ಪ್ರಮುಖರು, ಮಹಿಳೆಯರು, ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.