ಸಾರಾಂಶ
ಬೆಂಗಳೂರು : ಜಾತಿ ಗಣತಿ ವರದಿ ಜಾರಿಗೆ ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರ ವಿರೋಧದ ಬೆನ್ನಲ್ಲೇ ಗಾಣಿಗ, ಬ್ರಾಹ್ಮಣ, ವಿಶ್ವಕರ್ಮ ಹಾಗೂ ಕ್ರಿಶ್ಚಿಯನ್ ಸಮುದಾಯಗಳಿಂದಲೂ ವಿರೋಧ ವ್ಯಕ್ತವಾಗಿದೆ.
ಜಾತಿಗಣತಿ ವರದಿ ಅನುಷ್ಠಾನಕ್ಕೆ ಬ್ರಾಹ್ಮಣ ಸಮಾಜ ವಿರೋಧ ವ್ಯಕ್ತಪಡಿಸಿದೆ. ಬೆಂಗಳೂರಿನಲ್ಲಿ ಮಾತನಾಡಿದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಸರ್ಕಾರ ಕೊಟ್ಟಿರುವ ಪಟ್ಟಿಯಲ್ಲಿ ಬ್ರಾಹ್ಮಣರಲ್ಲಿ 44 ಉಪಜಾತಿಗಳಿವೆ ಎಂದಿದ್ದಾರೆ. 42.50 ಲಕ್ಷ ಇರುವ ಜನಸಂಖ್ಯೆಯನ್ನು 12-13 ಲಕ್ಷ ಎಂದು ತೋರಿಸಿದ್ದಾರೆ. ಇದನ್ನು ನಾವು ಒಪ್ಪಲ್ಲ. ಮತ್ತೊಮ್ಮೆ ಸಮೀಕ್ಷೆ ಮಾಡಿ ಎಂದು ಆಗ್ರಹಿಸಿದರು. ಅಲ್ಲದೆ, ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲು ಇಷ್ಟೆಲ್ಲಾ ಕಸರತ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಮಧ್ಯೆ, ಜಾತಿಗಣತಿ ವರದಿ ಜಾರಿ ವಿರೋಧಿಸಿ ವಿಜಯಪುರದಲ್ಲಿ ಬುಧವಾರ ಗಾಣಿಗ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಯಿತು. ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ನೇತೃತ್ವದಲ್ಲಿ ಗಾಣಿಗ ಸಮುದಾಯದವರು ಪ್ರತಿಭಟನೆ ನಡೆಸಿದರು. ಜಾತಿಗಣತಿಯಲ್ಲಿ ಗಾಣಿಗರು 6 ಲಕ್ಷ ಎಂದು ನಮೂದಿಸಿದ್ದಾರೆ. ಆದರೆ, ರಾಜ್ಯದಲ್ಲಿ ನಾವು 35 ಲಕ್ಷ ಜನರಿದ್ದೇವೆ. ಈ ಬಗ್ಗೆ ಮತ್ತೊಮ್ಮೆ ಗಣತಿಯಾಗಲಿ ಎಂದು ಒತ್ತಾಯಿಸಿದರು.
ಇದೇ ವೇಳೆ, ಅಖಿಲ ಕರ್ನಾಟಕ ವಿಶ್ವಬ್ರಾಹ್ಮಣ ಮಠಾಧಿಪತಿಗಳು ಹಾಗೂ ಪೀಠಾಧಿಪತಿಗಳ ಒಕ್ಕೂಟದ ಗೌರವಾಧ್ಯಕ್ಷ ಅನಂತ ವಿಭೂಸಿತ ಶಿವಸುಜ್ಞಾನತೀರ್ಥ ಮಹಾಸ್ವಾಮಿಯವರು ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಜಾತಿ ಸಮೀಕ್ಷೆಯಲ್ಲಿ ವಿಶ್ವಕರ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಸಮೀಕ್ಷೆಯಲ್ಲಿ ನಮ್ಮ ಜನಾಂಗವನ್ನು ಕೇವಲ 15 ಲಕ್ಷ ಎಂದು ನಮೂದಿಸಲಾಗಿದೆ. ಆದರೆ, ನಮ್ಮ ಸಮುದಾಯ ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಇದೆ ಎಂದರು. ರಾಜ್ಯದ ಪ್ರತಿ ಗ್ರಾಮದಲ್ಲಿಯೂ ವಿಶ್ವಕರ್ಮ ಬ್ರಾಹ್ಮಣರ ಕುಟುಂಬಗಳಿವೆ. ಇದನ್ನು ಪುನರ್ ಪರಿಶೀಲನೆ ಮಾಡಿ, ನೈಜವಾದ ಅಂಕಿ-ಸಂಖ್ಯೆ ನಮೂದಿಸಬೇಕು ಎಂದು ಆಗ್ರಹಿಸಿದರು.
ಈ ಮಧ್ಯೆ, ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಹಿಂದ ಚಳವಳಿಯ ರಾಜ್ಯ ಸಂಚಾಲಕ ಡೇವಿಡ್ ಸಿಮೆಯೋನ್, ಕ್ರೈಸ್ತ ಸಮುದಾಯವನ್ನು ಪ್ರವರ್ಗ 3 ‘ಬಿ’ ಗೆ ಸೇರ್ಪಡೆ ಮಾಡಬಾರದು. ಹಿಂದುಳಿದ ಚಿಕ್ಕ ಸಮುದಾಯದೊಂದಿಗೆ ನಮ್ಮನ್ನು ಸೇರಿಸಬೇಕು ಎಂದು ಮನವಿ ಮಾಡಿದರು. ಕ್ರೈಸ್ತರನ್ನು ಮತಾಂತರಗೊಂಡ ಪರಿಶಿಷ್ಟ ಜಾತಿ ಎಂದು ಸೇರಿಸಲಾಗಿದೆ. 12 ಲಕ್ಷ ಮೂಲ ಕ್ರೈಸ್ತರು ಎಂದು ತೋರಿಸಿದ್ದಾರೆ. ಹಾಗಾದರೆ, ಮೂಲ ಕ್ರೈಸ್ತರು ಎಂದರೇನು ಎಂದು ಪ್ರಶ್ನಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))