ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ವಿದ್ಯಾರ್ಥಿಗಳು ಕೇವಲ ಅಂಕ ಪಡೆಯಲು ಶಿಕ್ಷಣ ಪಡೆಯದೇ, ಮೆದುಳನ್ನು ಚುರುಕುಗೊಳಿಸುವ ಶಿಕ್ಷಣ ಪಡೆಯುವುದು ಅಗತ್ಯವಾಗಿದೆ ಎಂದು ಯುನಿಕ್ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಎನ್.ಮಂಜುನಾಥ್ ಹೇಳಿದರು.ಪಟ್ಟಣದ ಅರಳೇರಿ ರಸ್ತೆಯಲ್ಲಿ ಇರುವ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಿದರೆ ಜವಾಬ್ದಾರಿ ಮುಗಿಯಿತಿ ಎಂದುಕೊಳ್ಳದೆ ಶಾಲೆಯಿಂದ ಮನೆಗೆ ಬಂದು ಮೇಲೆ ಅವರ ಶಾಲೆಯಲ್ಲಿ ಕಲಿತ ಪಾಠ ಮತ್ತು ಹೋಂ ವರ್ಕ್ ಒಂದು ಬಾರಿ ಪರಿಶೀಲನೆ ಮಾಡಬೇಕು. ಮನೆಯಲ್ಲಿ ಮತ್ತೊಂದು ಬಾರಿ ಮಕ್ಕಳು ಓದುವುದನ್ನು, ಬರೆಯುವುದಕ್ಕೆ ಉತ್ತೇಜನ ನೀಡುವ ಜತೆಯಲ್ಲಿ ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕೆಂದರು.
ಪಠ್ಯೇತರ ಚಟುವಟಿಕೆಬಿಗ್ ಬಾಸ್ ಸ್ಪರ್ಧಿ ಅನುಷಾ ರೈ ಮಾತನಾಡಿ, ಪೋಷಕರು ಮಕ್ಕಳಿಗೆ ಶಿಕ್ಷಣ ಜೊತೆಗೆ ಸಾಹಿತ್ಯ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗಲು ಅವಕಾಶ ಕಲ್ಪಿಸಿಕೊಡಬೇಕೆಂದು ಹೇಳಿದರು.
ಪೋಷಕರು ಶಾಲಾ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಸಂಗೀತ, ಸಾಹಿತ್ಯ, ಕ್ರೀಡೆ, ಅಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಾಗ ಅವರು ಮಾನಸಿಕವಾಗಿ ದೈಹಿಕವಾಗಿ ಬೆಳೆಯಲು ಸಹಕಾರಿಯಾಗಲಿದೆ. ಮಕ್ಕಳು ಸಣ್ಣ ವಯಸ್ಸಿನಿಂದ ಕ್ರೀಡೆಯಲ್ಲಿ ಹೆಚ್ಚಾಗಿ ಭಾಗವಹಿಸಿದಾಗ ದೈಹಿಕವಾಗಿ ಸದೃಢವಾದರೆ, ಸಂಗೀತ ನಾಟ್ಯ ನಟನೆಗಳ ಕಡೆ ಮನಸ್ಸು ಗಟ್ಟಿಯಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಎಸ್‌ಎಂಸಿ ಕನ್ಟ್ರಕ್ಷನ್ ಸಂಸ್ಥಾಪಕ ಗೋಪಿನಾಥ್, ಸಿನಿಮಾ ನಿರ್ದೇಶಕ ಪ್ರೇಮ್ ಸಾಗರ್, ಶಾಲೆಯ ನಿರ್ದೇಶಕಿ ಎ.ವಿ ರಾಜೇಶ್ವರಿ, ಮಂಜುನಾಥ್, ಸಿಇಓ ವರುಣ್ ಕುಮಾರ್, ಮಂಜುನಾಥ್, ಪ್ರಿನ್ಸಿಪಾಲ್ ಜೋಬಿ ವರ್ಗೀಸ್ ಇದ್ದರು. ಇದೇ ವೇಳೆಯಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿದವು.