ಬ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ 9ನೇ ವರ್ಷದ ಬ್ರಾಮರೀ ಯಕ್ಷ ವೈಭವ ಕಾರ್ಯಕ್ರಮ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.

ಮಂಗಳೂರು: ಬ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ 9ನೇ ವರ್ಷದ ಬ್ರಾಮರೀ ಯಕ್ಷ ವೈಭವ ಕಾರ್ಯಕ್ರಮ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.

ಸಹಕಾರಿ ಧುರೀಣ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜರಾಮ ಭಟ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತೆಂಕು, ಬಡಗು, ಬಡಾಬಡಗು ಯಾವುದೇ ತಿಟ್ಟು ಆಗಲಿ, ಯಕ್ಷಗಾನವನ್ನು ಸವಿಯದವರು ಕರಾವಳಿಯಲ್ಲಿ ಇಲ್ಲ ಎಂದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ವಾಟ್ಸಾಪ್ ಮೂಲಕ ಬಳಗವನ್ನು ಕಟ್ಟಿಕೊಂಡು ಯಕ್ಷಗಾನ ಆಯೋಜಿಸುತ್ತಿರುವುದು ನಾಡಿಗೆ ಭೂಷಣ ಎಂದರು. ಉದ್ಯಮಿ ರಾಜಶೇಖರ ಕೋಟ್ಯಾನ್, ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ ಮಾತನಾಡಿದರು.

ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಕೆ.ಭಟ್ ಸೆರಾಜೆ ಅಧ್ಯಕ್ಷತೆ ವಹಿಸಿದ್ದರು.

ಪ್ರಶಸ್ತಿ ಪ್ರದಾನ-ಗೌರವ ಸಲ್ಲಿಕೆ:

ಹಿರಿಯ ಕಲಾವಿದ ಕೆ.ಎಚ್‌.ದಾಸಪ್ಪ ರೈ ಅವರಿಗೆ ‘ಭ್ರಾಮರೀ ಯಕ್ಷಮಣಿ’ ಪ್ರಶಸ್ತಿ, ನೇಪಥ್ಯ ಕಲಾವಿದ ಮೋನಪ್ಪ ಗೌಡ ಹಾಗೂ ಮುಡಿಪು ಕುರ್ನಾಡಿನ ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿಗೆ ‘ಭ್ರಾಮರೀ ಯಕ್ಷಸೇವಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ಬಳಗದ ಸದಸ್ಯರಾಗಿದ್ದ ರಮೇಶ್ ರೈ ತಲಪಾಡಿ ದೊಡ್ಡಮನೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಜತೆ ಕಾರ್ಯದರ್ಶಿ, ಹಾಪ್ ಕಾಮ್ಸ್ ವ್ಯವಸ್ಥಾಪಕರಾಗಿದ್ದ ರವಿಚಂದ್ರ ಶೆಟ್ಟಿ ಅಶೋಕನಗರ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ಟ್ರಸ್ಟ್ ಪ್ರಮುಖರಾದ ಸತೀಶ್ ಮಂಜೇಶ್ವರ ಸ್ವಾಗತಿಸಿದರು. ವಿನಯ ಕೃಷ್ಣ ಕುರ್ನಾಡು ವಂದಿಸಿದರು. ಲಕ್ಷ್ಮಿ ಮಚ್ಚಿನ, ಉಮೇಶ್ ಶೆಟ್ಟಿ, ಸತೀಶ್ ಇರಾ ಸನ್ಮಾನ ಪತ್ರ ವಾಚಿಸಿದರು. ದಿನೇಶ್ ಇರಾ ನಿರೂಪಿಸಿದರು.

ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅಂಬಾಶಪಥ, ಲಕ್ಷ್ಮಿ ಸ್ವಯಂವರ ಮತ್ತು ತಾಮ್ರಧ್ವಜ ಕಾಳಗ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.