ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಲು ಬ್ರ್ಯಾಂಡ್‌ ಕಲ್ಪನೆ: ಸುಕನ್ಯಾ ದೇಸಾಯಿ

| Published : Oct 19 2025, 01:02 AM IST

ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಲು ಬ್ರ್ಯಾಂಡ್‌ ಕಲ್ಪನೆ: ಸುಕನ್ಯಾ ದೇಸಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವಂತಾಗಲು ಬ್ರ್ಯಾಂಡ್‌ನ ಕಲ್ಪನೆ ಮೂಡಿಸಬೇಕು. ಅದೇ ಉದ್ದೇಶದಿಂದ ಸ್ವಸಹಾಯ ಉತ್ಪನ್ನ ಮೇಳ ಆಯೋಜಿಸಿದ್ದೇವೆ.

ನಂದಿಗದ್ದೆಯಲ್ಲಿ ಸಾವಯವ ಉತ್ಪನ್ನ ಮೇಳ

ಕನ್ನಡಪ್ರಭ ವಾರ್ತೆ ಜೋಯಿಡಾ

ನಾವು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವಂತಾಗಲು ಬ್ರ್ಯಾಂಡ್‌ನ ಕಲ್ಪನೆ ಮೂಡಿಸಬೇಕು. ಅದೇ ಉದ್ದೇಶದಿಂದ ಸ್ವಸಹಾಯ ಉತ್ಪನ್ನ ಮೇಳ ಆಯೋಜಿಸಿದ್ದೇವೆ ಎಂದು ಹರಿಪ್ರಿಯಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಕನ್ಯಾ ದೇಸಾಯಿ ಹೇಳಿದರು.

ತಾಲೂಕಿನ ನಂದಿಗದ್ದೆ ಗ್ರಾಪಂ ವ್ಯಾಪ್ತಿಯ ರಂಗಮಂದಿರದಲ್ಲಿ ಜೋಯಿಡಾ ತಾಪಂ, ನಂದಿಗದ್ದೆ ಗ್ರಾಪಂ ಸಹಯೋಗದಲ್ಲಿ ಹರಿಪ್ರಿಯಾ ಸಂಜೀವಿನಿ ಒಕ್ಕೂಟದ ಹತ್ತನೇ ವಾರ್ಷಿಕ ಸಾಮಾನ್ಯ ಸಭೆ, ಪಂಚಾಯಿತಿ ಮಟ್ಟದ ಸಾವಯವ ಉತ್ಪನ್ನ ಮೇಳ ಹಾಗೂ ಉಚಿತ ಆರೋಗ್ಯ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೋಯಿಡಾ ತಾಲೂಕನ್ನು ಸರ್ಕಾರ ಸಾವಯವ ತಾಲೂಕನ್ನಾಗಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಬ್ರ್ಯಾಂಡ್‌ ಕಲ್ಪನೆ ಮೂಡಿಸುವ ಉದ್ದೇಶದಿಂದ ಸಭೆ ಆಯೋಜಿಸಿದ್ದೇವೆ ಎಂದರು.

ಕಾರ್ಯಕ್ರಮವನ್ನು ಗ್ರಾಪಂ ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ ಉದ್ಘಾಟಿಸಿದರು. ಮಂಗಲಾ ಉಪಾಧ್ಯ ಹರಿಪ್ರಿಯಾ ಸಂಜೀವಿನಿ ಒಕ್ಕೂಟದ ವಾರ್ಷಿಕ ವರದಿ ಓದಿದರು. ಅಬ್ದುಲ್ ನಜೀರ್‌ಸಾಬ್‌ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ವಾಸುದೇವ ಭಾಗವತ ಅವರು ಸ್ವಸಹಾಯ ಸಂಘಗಳ ಪಾತ್ರ, ಮಹತ್ವ, ತರಬೇತಿ, ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆಯ ವ್ಯವಸ್ಥೆ ಕುರಿತು ವಿವರಿಸಿದರು.

ಜೋಯಿಡಾ ತಾಲೂಕು ಕಾರ್ಯಕ್ರಮ ಅಧಿಕಾರಿ ಹೊನ್ನಪ್ಪ ಹಲಗೇರ ಮಾತನಾಡಿ, ಸರ್ಕಾರ ಮಹಿಳೆಯರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಬಲೀಕರಣ ಮಾಡುವ ಉದ್ದೇಶದಿಂದ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಒತ್ತು ನೀಡುವ ಕೆಲಸ ಮಾಡುತ್ತಿದೆ. ಜತೆಗೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಗ್ರಾಮದ ಎಲ್ಲ ಮಹಿಳೆಯರು ಸ್ವಸಹಾಯ ಸಂಘಗಳ ಸದಸ್ಯರಾಗುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.

ನಂದಿಗದ್ದೆ ಗ್ರಾಪಂ ಸದಸ್ಯ ಧವಳೋ ಸಾವರ್ಕರ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಶೈಕ್ಷಣಿಕ ಸ್ಥಿತಿ ಹಾಗೂ ಆರ್ಥಿಕ ಮಟ್ಟ ಸುಧಾರಣೆಗೆ ಸ್ವಸಹಾಯ ಸಂಘಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಾಲ ಹಾಗೂ ಸ್ವ ಉದ್ಯೋಗ ಮಾಡಲು ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಎಲ್ಲ ಯೋಜನೆಗಳ ಲಾಭ ಪಡೆಯಬೇಕಾದರೆ ಶೈಕ್ಷಣಿಕವಾಗಿ ಮಹಿಳೆಯರು ಶಿಕ್ಷಿತರಾಗಿ, ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.

ತಾಲೂಕು ವ್ಯವಸ್ಥಾಪಕ ಸಂತೋಷ ಪಾಟೀಲ ಮಾತನಾಡಿ, ಸ್ವಸಹಾಯ ಸಂಘದಲ್ಲಿನ ಸಿಬ್ಬಂದಿ, ಸಖಿಗಳ ಪಾತ್ರದ ಕುರಿತು, ಸ್ವಸಹಾಯ ಸಂಘಗಳ ವಾರ್ಷಿಕ ಸಭೆಯ ಉದ್ದೇಶ ಕುರಿತು, ಆಹಾರ ಉತ್ಪನ್ನದ ಗುಣಮಟ್ಟ, ಮಾರುಕಟ್ಟೆಯ ಇನ್ನಿತರ ವಿಷಯದ ಕುರಿತು ಮಾಹಿತಿ ನೀಡಿದರು. ಮೇಲ್ವಿಚಾರಕಿ ಸುವರ್ಣಾ ಗಾವಡೆ, ಸದಸ್ಯರಾದ ಶೋಭಾ ಎಲ್ಲೇಕರ ಕಾರ್ಯಕ್ರಮದ ಕುರಿತು ಮಾತನಾಡಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಯೋಜನೆಗಳ ಮಾಹಿತಿಯನ್ನು ವ್ಯವಸ್ಥಾಪಕ ಪಿ. ರಾಮಕೃಷ್ಣ ನೀಡಿದರು.

ಉತ್ತಮ ಸಂಘಗಳಿಗೆ ಪ್ರಥಮ, ದ್ವಿತೀಯ ಹಾಗೂ ಸಮಾಧಾನಕರ ಬಹುಮಾನ ವಿತರಣೆ ಮಾಡಲಾಯಿತು. ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕಿ ವಿಜಯಾ ನಾಯ್ಕ ಉಚಿತ ಆರೋಗ್ಯ ಶಿಬಿರ ನಡೆಸಿಕೊಟ್ಟರು. ಸೀತಾ ದಾನಗೇರಿ ವಂದಿಸಿದರು.