ಸಾರಾಂಶ
ಶಾಸಕರ ಧೋರಣೆ ಖಂಡಿಸಿ ಪ್ರತಿಭಟನೆ ಕನ್ನಡಪ್ರಭ ವಾರ್ತೆ ಕುಂದಾಣ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಅವಶ್ಯಕವಾದ ನೀರಿನ ಪ್ರಮಾಣ ಪರಿಶೀಲಿಸಿ ಶಾಸಕರು ಮತ್ತು ಸಚಿವರನ್ನು ಭೇಟಿ ಮಾಡಿ ಅಧೀವೇಶನದಲ್ಲಿ ಪ್ರಸ್ತಾಪಿಸುವಂತೆ ತಿಳಿಸಲಾಗಿದೆ. ಈಗಲಾದರೂ ಮೌನ ಮುರಿದು ನೀರಾವರಿಗಾಗಿ ಮಾತನಾಡಬೇಕು. ಸಂಘಟನಾತ್ಮಕವಾಗಿ ಎಲ್ಲರೂ ಒಗ್ಗೂಡಿ ಒಕ್ಕೊರಲಿನಿಂದ ಧ್ವನಿ ಎತ್ತಬೇಕು ಎಂದು ನೀರಾವರಿ ಹೋರಾಟಗಾರ ಮತ್ತು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಆಗ್ರಹಿಸಿದರು.ಜಿಲ್ಲಾಡಳಿತ ಭವನದ ಎದುರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಶಾಶ್ವತ ನೀರಾವರಿ ದುಂಡುಮೇಜಿನ ಸಭೆಗೆ ಗೈರು ಹಾಜರಾಗುವ ಮೂಲಕ ನೀರಾವರಿ ಹೋರಾಟವನ್ನು ಕಡೆಗಣಿಸುತ್ತಿರುವ ಶಾಸಕರ ಧೋರಣೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಎತ್ತಿನಹೊಳೆ ಯೋಜನೆ ಅನುಷ್ಠಾನ ಮಾಡಿದರೂ ನೀರಿಲ್ಲ ಎಂದು ಜಲಮೂಲದ ವೈಜ್ಞಾನಿಕ ತಂಡ ಹೇಳಿದೆ. ಇವರು ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ೫೪೦೦ ಕೆರೆಗಳಿದ್ದು ಡಾ.ಪರಮಶಿವಯ್ಯ ವರದಿ ಜಾರಿಯಾದರೆ ಮಾತ್ರ ಈ ಎಲ್ಲಾ ಕೆರೆಗಳನ್ನು ತುಂಬಿಸಿದರೆ ನೀರಿನ ಬವಣೆ ತೀರುತ್ತದೆ. ಎತ್ತಿನಹೊಳೆ ನೀರಾವರಿ ಯೋಜನೆ ಒಂದು ಅವೈಜ್ಞಾನಿಕವಾಗಿದ್ದು, ಇದೊಂದು ಲೂಟಿ ಹೊಡೆಯುವ ಯೋಜನೆಯಾಗಿದೆ. ಈ ಯೋಜನೆ ಪ್ರಾರಂಭವಾಗಿ ೧೫ ವರ್ಷಗಳು ಕಳೆದರೂ ಇನ್ನೂ ನೀರು ತರಲು ಸಾಧ್ಯವಾಗಲಿಲ್ಲ ಎಂದು ದೂರಿದರು.ಪ್ರಾರಂಭದಲ್ಲಿ ೮ ಸಾವಿರ ಕೋಟಿ ರುಪಾಯಿಗಳ ಯೋಜನೆಯಾಗಿ ಬಂದು ನಂತರ ಈಗ ೨೪ ಸಾವಿರ ಕೋಟಿ ರು. ದಾಟಬಹುದು ಎನ್ನಲಾಗುತ್ತಿದೆ. ಜನಪ್ರತಿನಿಧಿಗಳು ನೇರ ಮಾರಣಾಂತಿಕ ಕಾಯಿಲೆಗಳಿಗೆ ದೂಡುವಂತಹ ಕೈಗಾರಿಕೆಗಳ ನಿರ್ಮಾಣದಲ್ಲಿ ಆಸಕ್ತಿ ತೋರುತ್ತಿದ್ದಾರೆ. ಆದರೆ ರೈತರ ಕೃಷಿ ಭೂಮಿಗೆ ಅವಶ್ಯಕವಾದ ನೀರಿಗಾಗಲಿ, ಜನರಿಗೆ ಕುಡಿಯುವ ನೀರಿಗಾಗಲಿ ಯಾವುದೇ ಆಸಕ್ತಿ ಇಲ್ಲ. ಎತ್ತಿನಹೊಳೆ ಮತ್ತು ಕೆ.ಸಿ.ವ್ಯಾಲಿಗೆ ಜೋತು ಬೀಳುವುದರಿಂದ ಜಿಲ್ಲೆಗೆ ಶಾಶ್ವತ ನೀರಾವರಿ ಲಭಿಸುವುದು ಕನಸಿನ ಮಾತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಗೆ ಶಾಶ್ವತ ನೀರಾವರಿಯನ್ನು ಕಲ್ಪಿಸುವ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹಾಗೂ ಜಿಲ್ಲೆಯಲ್ಲಿ ಸಚಿವರು, ಶಾಸಕರ ಯಾವುದೇ ಕಾರ್ಯಕ್ರಮಗಳು ನಡೆಸಲು ಬಿಡುವುದಿಲ್ಲ. ಆ ರೀತಿಯ ಸಂಘರ್ಷಕ್ಕೆ ಎಡೆ ಮಾಡಿಕೊಡಬೇಡಿ ಎಂದು ಎಚ್ಚರಿಸಿದರು.ಸಾಮಾಜಿಕ ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಸರ್ಕಾರದ ಹಲವಾರು ನೀರಾವರಿ ಯೋಜನೆಗಳಿಂದ ಕುಡಿಯುವ ನೀರು ವಿಷವಾಗ್ತಿದೆ. ಕೃಷಿಗೂ ಸಹ ಯೋಗ್ಯವಲ್ಲದ ತ್ಯಾಜ್ಯಯುಕ್ತ ನೀರು ಬಿಡುತ್ತಿರುವುದು ನೀರಾವರಿ ಯೋಜನೆಯ ವೈಫಲ್ಯ ತೋರಿಸುತ್ತಿದೆ. ಆದರೆ ಸಾರ್ವಜನಿಕರ ಸಾವಿರಾರು ಕೋಟಿ ರು. ತೆರಿಗೆ ಹಣ ವ್ಯಯ ಮಾಡುತ್ತಿರುವುದು ಎಷ್ಟು ಸರಿ ಎಂದು ಕಿಡಿಕಾರಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರಾದ ಕೋಲಾರ ಜಿ.ನಾರಾಯಣಸ್ವಾಮಿ, ನಲ್ಲೂರು ಹರೀಶ್, ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರೇಗೌಡ, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡರಾದ ನಂಜಪ್ಪ, ವೆಂಕಟರಮಣಪ್ಪ, ಗೌರಿಬಿದನೂರು ಸನ್ನತ್ ಕುಮಾರ್, ರಾಜಣ್ಣ, ಕನ್ನಡಪರ, ದಲಿತಪರ ಕಾರ್ಮಿಕಪರ ಚಳವಳಿಗಳ ಮುಖಂಡರು ಭಾಗವಹಿಸಿದ್ದರು.